ಮಾಗಡಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಗಳೂರು ಮನೆ ಮುಂದೆ ನಕಲಿ ನಂಬರ್ ಪ್ಲೇಟ್ನ ಕಾರು ಪತ್ತೆ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ಮಾಜಿ ಶಾಸಕ ಎ.ಮಂಜುನಾಥ್ ಹೇಳಿದಂತೆ ಎರಡು ವರ್ಷಗಳ ಹಿಂದೆಯೇ ಅನೀಶ್ ಅವರಿಗೆ ಕಾರು ನೀಡಿದ್ದೆ ಎಂದು ರಾಜ್ಯ ಒಕ್ಕಲಿಗರ ಸಂದ ಮಾಜಿ ನಿರ್ದೇಶಕ, ಬಿಎಂಆರ್ಡಿಎ ಮಾಜಿ ಅಧ್ಯಕ್ಷ ಪೂಜಾರಿಪಾಳ್ಯದ ಕೃಷ್ಣಮೂರ್ತಿ ಸ್ಪಷ್ಟ ಪಡಿಸಿದರು.
ಕಾರು ಮಾಲೀಕ ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್, ಕಳೆದೆರಡು ವರ್ಷಗಳ ಹಿಂದೆ ಜೆಡಿಎಸ್ನಲ್ಲಿದ್ದಾಗ ನನಗೆ ಓಡಾಡಲು ಕಾರು ನೀಡಿರುವುದಾಗಿ ಹಾಗೂ ಉದ್ದೇಶಪೂರ್ವಕವಾಗಿ ಕೆ.ಕೃಷ್ಣಮೂರ್ತಿ ಅವರೇ ನಂಬರ್ ಪ್ಲೇಟ್ ಬದಲಾಯಿಸಿರಬಹುದು ಎಂದು ಬೆಂಗಳೂರಿನ ಸದಾಶಿವನಗರ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಆಧರಿಸಿ ಪೊಲೀಸರು ನನಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗಿದ್ದೆ ಎಂದು ಮಾಗಡಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎರಡು ವರ್ಷಗಳ ಹಿಂದೆ ಎ.ಮಂಜುನಾಥ್ ಅವರಿಗೆ ಅನೀಶ್ ಅಲಿಯಾಸ್ ಮಧು ಎಂಬುವವರಿಂದ ಒಂದುವಾರದ ಅವಧಿಗೆ 20 ಲಕ್ಷ ರೂ. ಸಾಲ ಕೊಡಿಸಿದ್ದೆ. ವರ್ಷಗಳು ಕಳೆದರೂ ಸಾಲ ಮರಳಿಸದ ಕಾರಣ, ಮಂಜುನಾಥ್ ಅವರ ಬಿಡದಿ ಮನೆಗೆ ಅನೀಶ್ ಅವರೊಂದಿಗೆ ಹೋಗಿ ಹಣ ವಾಪಸ್ ಕೊಡುವಂತೆ ಕೇಳಿದ್ದೆವು. ಆಗ ಹಣ ವಾಪಸ್ ಕೊಡುವವರೆಗೆ ನನಗೆ ನೀಡಿದ ಕಾರನ್ನು ಅನೀಶ್ಗೆ ನೀಡುವಂತೆ ಎ.ಮಂಜುನಾಥ್ ಹೇಳಿದ್ದರು. ಅದರಂತೆ ಕಾರನ್ನು ನೀಡಿದ್ದೆ. ಎರಡೂ ವರ್ಷಗಳ ಕಾರಿನ ಇನ್ಶೂರೆನ್ಸ್ ಅನ್ನು ಅನೀಶ್ ಅವರೇ ಪಾವತಿಸಿದ್ದಾರೆ. ಆದರೆ ಕಳೆದೆರಡು ತಿಂಗಳ ಹಿಂದೆ ಕ್ಯಾನ್ಸರ್ನಿಂದ ಅನೀಶ್ ಮೃತಪಟ್ಟಿದ್ದು, ಸದ್ಯ ಕಾರನ್ನು ಯಾರು ಬಳಸುತ್ತಿದ್ದರು? ಯಾರು ಕಾರಿನ ನಂಬರ್ ಪ್ಲೇಟ್ ಬದಲಾಯಿಸಿದ್ದಾರೆಂಬುದು ನನಗೆ ಗೊತ್ತಿಲ್ಲ. ಉದ್ದೇಶಪೂರ್ವಕವಾಗಿ ಮಾಜಿ ಶಾಸಕರು ಪ್ರಕರಣದಲ್ಲಿ ನನ್ನ ಹೆಸರು ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಶ್ರಯ ಕಮಿಟಿ ಸದಸ್ಯ ವೆಂಕಟೇಶ್, ಶಿವಕುಮಾರು, ವಿಶ್ವಕರ್ಮ ಆಚಾರ್ ಮಂಜುನಾಥ್, ದಂಡಿಗೆಪುರ ದಿನೇಶ್, ಮಧು, ಇತರರು ಇದ್ದರು.