ಜಿಲ್ಲೆ

ಸಾಲ ಪಡೆಯೋಕೆ ಶಿಫಾರಸು ಪತ್ರ ಬೇಡ ; ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ; ಅಧಿಕಾರಿಗಳು ಒತ್ತಾಯಿಸಿದರೆ ದೂರು ಕೊಡಿ

ತುಮಕೂರು: ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯುವ ರೈತರು ಬ್ಯಾಂಕ್ ನಿರ್ದೇಶಕರಿಂದ ಶಿಫಾರಸು ಪತ್ರ ತರುವ ಅವಶ್ಯಕತೆಯಿಲ್ಲ, ಅಧಿಕಾರಿಗಳು ಪತ್ರಕ್ಕೆ ಒತ್ತಾಯಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಕೆ ನೀಡಿದರು.

ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ಗಳಲ್ಲಿ ಶಿಾರಸು ಪತ್ರ ಕೇಳಿದರೆ ಕೂಡಲೇ ಸಹಕಾರ ಇಲಾಖೆಗೆ ದೂರು ನೀಡಿದರೆ ನಾವು ಕ್ರಮಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ರಾಜ್ಯದ ಸಹಕಾರ ಇಲಾಖೆ ವ್ಯಾಪ್ತಿಯಲ್ಲಿ ಸಹಕಾರ ಬ್ಯಾಂಕ್, ಸಂಘಗಳಲ್ಲಿ ಖಾಲಿ ಇರುವ 5000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು 2000 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಶೀಘ್ರದಲ್ಲಿಯೇ ನೇಮಕ ಪ್ರಕ್ರಿಯೆ ಆರಂಭವಾಗಲಿದ್ದು ನಿರುದ್ಯೋಗಿಗಳಿಗೆ ಉದ್ಯೋಗದ ಜತೆಗೆ ಸಹಕಾರ ಇಲಾಖೆಗೂ ಬಲ ಬರಲಿದೆ ಎಂದರು.

ಗ್ರಾಪಂಗೆ ಒಂದರಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತೆರೆಯುವ ಗುರಿ ಹೊಂದಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇದರ ಸಂಖ್ಯೆ ಹೆಚ್ಚಾಗಿದೆ. ಪಂಚಾಯಿತಿಗೊಂದು ಸಂಘವಿದ್ದರೆ ಆರ್ಥಿಕ ಪ್ರಗತಿ ಸಾಧಿಸಲು ಅನುಕೂಲವಾಗುತ್ತಿದೆ. ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗಿಂತ ತುಮಕೂರಿನ ಡಿಸಿಸಿ ಬ್ಯಾಂಕ್ ಸಾಲ ನೀಡುವುದರಲ್ಲಿ ಮುಂದಿದೆ ಎಂದರು.

ರಾಜ್ಯದಲ್ಲಿ 15300 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದ್ದು, 12543 ಕೋಟಿ ರೂ. ಸಾಲ ವಿತರಣೆಯಾಗಿದೆ. ಸ್ತ್ರೀಶಕ್ತಿ, ಬಡವರು, ದಲಿತರಿಗೆ ಆದ್ಯತೆ ನೀಡಲಾಗಿದೆ. 4611 ಬಡವರಿಗೆ ಬಡವರ ಬಂಧು ಯೋಜನೆಯಲ್ಲಿ ತುಮಕೂರು ಡಿಸಿಸಿ ಬ್ಯಾಂಕ್ ಸಾಲ ನೀಡಿದೆ. ರಾಜ್ಯದ ಉಳಿದ ಬ್ಯಾಂಕ್‌ಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

61 ಕೋಟಿ ರೂ. ಸಾಲ ಮನ್ನಾ ಹಣ ತುಮಕೂರು ಡಿಸಿಸಿ ಬ್ಯಾಂಕ್‌ಗೆ ನೀಡುವುದು ಬಾಕಿ ಇದೆ. ರಾಜ್ಯದಲ್ಲಿ 295 ಕೋಟಿ ರೂ. ಬಾಕಿಯಿದೆ. ತುಮಕೂರಿನಲ್ಲಿ ಸಾಲ ಕೇಳಿದವರಿಗೆಲ್ಲ ಸಾಲ ನೀಡಲಾಗಿದೆ. ವಸೂಲಿ ಕೂಡ ಅಷ್ಟೇ ಪ್ರಾಮಾಣಿಕತೆಯಿಂದ ನಡೆಯುತ್ತಿದೆ ಎಂದು ಶ್ಲಾಘಿಸಿದ ಸಚಿವರು, ಸರ್ಕಾರದಿಂದ ಬರಬೇಕಿರುವ ಬಾಕಿ ನೀಡಲು ವಿಶೇಷ ಗಮನ ನೀಡಲಾಗುವುದು ಎಂದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆಗೆ ಡಿಸಿಸಿ ಬ್ಯಾಂಕ್ ಸಾಲ ನೀಡಿರುವ ಬಗ್ಗೆಯೂ ಪರಿಶೀಲನೆ ನಡೆಸಿದ್ದು, ಕಾಲಕಾಲಕ್ಕೆ ಬಡ್ಡಿ ಹಾಗೂ ಸಾಲದ ಕಂತನ್ನು ಸರಿಯಾಗಿ ಪಾವತಿಸಲಾಗುತ್ತಿದೆ ಎಂದು ವಿವರಿಸಿದರು.

ರಾಜ್ಯದ ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಹಾಗೂ 5000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಒಂದೇ ತಂತ್ರಾಂಶದಡಿ ತಂದು ಕಾರ್ಯನಿರ್ವಹಿಸುವ ಚಿಂತನೆಯಿದೆ, ಯಶಸ್ವಿನಿ ಯೋಜನೆ ಮರು ಜಾರಿ ಅಗತ್ಯವಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್‌ನ 36ನೇ ಶಾಖೆ ತೋವಿನಕೆರೆಯಲ್ಲಿ ಶನಿವಾರ ಉದ್ಘಾಟನೆಯಾಗಲಿದೆ. ಹೋಬಳಿಗೊಂದು ಶಾಖೆ ಸ್ಥಾಪಿಸುವ ಉದ್ದೇಶವಿದ್ದು ಹೊದೇನಕಲ್, ಮಾಯಸಂದ್ರ, ಸಿ.ಎಸ್.ಪುರದಲ್ಲಿ ಶೀಘ್ರದಲ್ಲಿಯೇ ಶಾಖೆಗಳು ಆರಂಭವಾಗಲಿವೆ ಎಂದರು. ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಬಿ.ಸುರೇಶ್‌ಗೌಡ, ಸಹಕಾರ ಸಂಘಗಳ ಉಪಾಧ್ಯಕ್ಷ ಕಾಂತರಾಜ್, ಬ್ಯಾಂಕ್ ನಿರ್ದೇಶಕರು ಇದ್ದರು.

ಎಚ್.ವಿಶ್ವನಾಥ್ ಅವರು ಸೋತಿದ್ದರು. ಆದರೂ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಆದರೆ, ಸಚಿವರನ್ನಾಗಿ ಮಾಡಲು ಕೋರ್ಟ್ ತೀರ್ಪು ಅವಕಾಶ ನೀಡದ ಹಿನ್ನೆಲೆಯಲ್ಲಿ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕು. ಅವರನ್ನು ಮೂಲೆಗುಂಪು ಮಾಡುವುದಾಗಿದ್ದರೆ ಪರಿಷತ್‌ಗೆ ನೇಮಕ ಮಾಡುತ್ತಿರಲಿಲ್ಲ. ಎಸ್.ಟಿ.ಸೋಮಶೇಖರ್ ಸಹಕಾರ ಸಚಿವ