ಜಿಲ್ಲೆ

ಸಾಲ ತೀರಿಸಲು ಸುಲಿಗೆ ದಾರಿ ಹಿಡಿದಿದ್ದ ದಂಪತಿ ಬಂಧನ

ಮೈಸೂರು: ಜೂಜಾಟದಿಂದ ಮಾಡಿಕೊಂಡಿದ್ದ ಸಾಲ ತೀರಿಸಲು ಸುಲಿಗೆ ದಾರಿ ಹಿಡಿದಿದ್ದ ದಂಪತಿಯನ್ನು ಬಂಧಿಸಲಾಗಿದೆ.

ನಗರದ ಕೆಎಚ್‌ಬಿ ಕಾಲನಿಯಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣದ ಆರೋಪಿಗಳನ್ನು ಪೊಲೀಸರು 48 ಗಂಟೆಗಳ ಅವಧಿಯಲ್ಲೇ ಬಂಧಿಸಿದ್ದು, ಆರೋಪಿ ದಂಪತಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಗೃಹಪ್ರವೇಶದ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಚಿನ್ನಾಭರಣ ವ್ಯಾಪಾರಿ ಬಾಬುರಾವ್ (57) ಅವರ ನಿವಾಸಕ್ಕೆ ಆರೋಪಿಗಳು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಬಾಬುರಾವ್ ಹಾಗೂ ಪತ್ನಿ ಕಮಲಬಾಯಿ(52) ಅವರಿಗೆ ಚಾಕುವಿನಿಂದ ಇರಿದು ಪರಾರಿ ಆಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜತೆಗೆ, ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದರು. ಆ.19ರಂದು ಪ್ರಕರಣದ ಅರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.


ಆರೋಪಿ ಆನ್‌ಲೈನ್ ಜೂಜಾಟದ ಚಟದಿಂದಾಗಿ ಲಕ್ಷಾಂತರ ರೂ. ಕಳೆದುಕೊಂಡು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಆರೋಪಿ ದಂಪತಿ ಸುಲಿಗೆ ಮಾಡಲು ಸಂಚು ರೂಪಿಸಿದ್ದರು ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.


ವಿಜಯನಗರ ಉಪ ವಿಭಾಗದ ಎಸಿಪಿ ಗಜೇಂದ್ರಪ್ರಸಾದ್, ವಿಜಯನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಶಂಕರ್, ಪಿಎಸ್‌ಐ ವಿಶ್ವನಾಥ್, ನಾರಾಯಣ ಹಾಗೂ ಸಿಬ್ಬಂದಿಯಾದ ಶಂಕರ್, ಲೋಕೇಶ್, ಪ್ರಭಾಕರ್, ನಂದೀಶ್, ಶಿವಕುಮಾರ್, ಮಂಜುನಾಥ್, ಸಂಜಯ್, ಶ್ರೀನಿವಾಸ್‌ಮೂರ್ತಿ, ಕಾಮಣ್ಣ ಮತ್ತು ಸಿ.ಡಿ.ಆರ್. ವಿಭಾಗದ ಕುಮಾರ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.