ಜಿಲ್ಲೆ

ಸಾಲ ತೀರಿಸಲು ಪ್ರಯಾಣ ದರ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ತಾವು ಅಧಿಕಾರದಲ್ಲಿ ಇದ್ದಾಗ ಬಿಜೆಪಿಯವರು ಎಷ್ಟು ಬಾರಿ, ಎಷ್ಟು ಪ್ರತಿಶತ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದ್ದರು ಎಂಬುದನ್ನು ನೆನಪು ಮಾಡಿಕೊಂಡು ನಂತರ ಹೋರಾಟ ಮಾಡಲಿ ಎಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶೇ. 15ರಷ್ಟು ಪ್ರಯಾಣ ದರ ಹೆಚ್ಚು ಮಾಡಿದ್ದಕ್ಕೆ ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ನೀವು ಮಾಡಿದ ಸಾಲದ ಹೊರೆ ತೀರಿಸಲು ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರ ತೆಗೆದುಕೊಂಡಿದ್ದೇವೆ ಹೊರತು, ಗ್ಯಾರಂಟಿ ಹಣ ಹೊಂದಿಸಲು ಅಲ್ಲ ಎಂದು ಬಿಜೆಪಿಗೆ ತಿವಿದಿದ್ದಾರೆ.

2008ರಿಂದ 2013ರ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಒಟ್ಟು ಶೇ 47.8ರಷ್ಟು ಪ್ರಯಾಣದರ ಏರಿಕೆ ಮಾಡಿತ್ತು. ಶಕ್ತಿ ಯೋಜನೆಯ ಹೊರೆ ಕಡಿಮೆ ಮಾಡಿಕೊಳ್ಳಲು ದರ ಹೆಚ್ಚಳ ಮಾಡಲಾಗಿದೆ ಎಂದು ಬಿಜೆಪಿ ಮುಖಂಡರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಮಹಿಳಾ ಸಬಲೀಕರಣ ಇಷ್ಟವಿಲ್ಲ. ಹಾಗಾಗಿ, ಶಕ್ತಿ ಯೋಜನೆ ವಿರೋಧಿಸುತ್ತಿದ್ದಾರೆ ಎಂದು ದೂರಿದರು.

ಯಡಿಯೂರಪ್ಪ 2020ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಶೇ. 12ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿದ್ದರು. 2023ರಲ್ಲಿ ಬಿಜೆಪಿ ಸರ್ಕಾರದ ಅವಧಿ ಮುಗಿದಾಗ ಸಾರಿಗೆ ನಿಗಮಗಳಲ್ಲಿ 5,900 ಕೋಟಿ ರೂ. ಹೊರೆ ಉಳಿಸಿದ್ದರು. ವೇತನ ಪರಿಷ್ಕರಣೆ ಮಾಡಿದರೂ ಸೌಲಭ್ಯ ನೀಡಿರಲಿಲ್ಲ. ಖಾಲಿ ಹುದ್ದೆ ಭರ್ತಿ ಮಾಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. 9 ಸಾವಿರ ನೌಕರರ ನೇಮಕಾತಿ ಮಾಡಿದೆ ಎಂದರು.