ಜಿಲ್ಲೆ

ಸಾರ್ವಭೌಮತ್ವ ಉಳಿಸಲು ಶ್ರಮಿಸಿದ ನಾಯಕ

ಕುರುಗೋಡು: ದೇಶದ ಸಮಗ್ರತೆ ಮತ್ತು ಏಕತೆಗಾಗಿ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರ ಅತ್ಯುನ್ನತ ತ್ಯಾಗ ಸ್ಮರಿಸಲು ಪ್ರತಿ ವರ್ಷ ಬಲಿದಾನ ದಿವಸ ಆಚರಿಸಲಾಗುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶ್ಯಾಮಾಪ್ರಸಾದ್ ಮುಖರ್ಜಿ ಬಲಿದಾನ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮುಖರ್ಜಿ ದೇಶದ ಅಖಂಡತೆ, ಸಾರ್ವಭೌಮತ್ವ ಉಳಿವಿಗಾಗಿ ಬಲಿದಾನಗೈದ ಧೀಮಂತ ನಾಯಕರಾಗಿದ್ದಾರೆ.ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಲು ಆಗ್ರಹಿಸಿ ’ಏಕ್ ವಿಧಾನ್, ಏಕ್ ನಿಶಾನ್, ಏಕ್ ಪ್ರಧಾನ್’ ತತ್ವಕ್ಕಾಗಿ ಬಲವಾಗಿ ಹೋರಾಡಿದ್ದರು. ಡಾ. ಮುಖರ್ಜಿ ಅವರು ದೇಶದ ಏಕತೆಯ ಸಂಕೇತವಾಗಿದ್ದರು. ಭಾರತೀಯ ಜನ ಸಂಘದ ಸಂಸ್ಥಾಪಕ ಮುಖರ್ಜಿ ಅವರ ಆದರ್ಶಗಳು ಎಂದಿಗೂ ಸ್ಫೂರ್ತಿಯಾಗಿವೆ ಎಂದು ಮದಿರೆ ಮರಿಸ್ವಾಮಿ ತಿಳಿಸಿದರು. ಪ್ರಮುಖರಾದ ರವಿ ರೆಡ್ಡಿ, ಉದಯ್ ಕುಮಾರ್, ಯೋಗೀಶ್, ಪಟ್ಟಣಸೆರಗು ತಿಪ್ಪೇರುದ್ರ, ಬಸವರಾಜ, ಮಲ್ಲಿಕಾರ್ಜುನ, ಪಟ್ಟಣಸೆರಗು ಗವಿಸಿದ್ದಪ್ಪ ಇತರರಿದ್ದರು.