ಜಿಲ್ಲೆ

ಸಾರ್ವತ್ರಿಕ ಪಿಂಚಣಿ ಸೌಲಭ್ಯ ಜಾರಿಗೆ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ ಆಗ್ರಹ

ಮೈಸೂರು: 60 ವರ್ಷ ದಾಟಿರುವ ಎಲ್ಲರಿಗೂ ಸಾರ್ವತ್ರಿಕ ಪಿಂಚಣಿ ಸೌಲಭ್ಯವನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ ಆಗ್ರಹಿಸಿದೆ.

ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ 9ನೇ ಸಮ್ಮೇಳನದಲ್ಲಿ ಈ ಒತ್ತಾಯ ಕೇಳಿ ಬಂದಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯನ್ನು 2007ರಲ್ಲಿ ಜಾರಿಗೊಳಿಸಿದೆ. ಬಡತನ ರೇಖೆಗಿಂತ ಕೆಳಗಿರುವ, 60 ವರ್ಷ ದಾಟಿರುವ ಹಿರಿಯ ನಾಗರಿಕರಿಗೆ 2,000 ನೀಡಲಾಗುತ್ತಿದೆ. 2007ರಿಂದ ಈವರೆಗೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಈ ಪಿಂಚಣಿ ಮೊತ್ತ ಏರಿಕೆಯಾಗಿಲ್ಲ. ಬಡತನ ರೇಖೆಯ ಕೆಳಗಿನ, ಮೇಲಿನ ಎಂದೆಲ್ಲ ವಿಭಾಗ ಮಾಡದೇ ಎಲ್ಲ ಹಿರಿಯರಿಗೆ ಪಿಂಚಣಿ ಜಾರಿ ಮಾಡಬೇಕು ಎಂದು ಆಗ್ರಹಿಸಲಾಯಿತು.

ಯಾವುದೇ ಪಿಂಚಣಿ ಇಲ್ಲದವರಿಗೆ ತಿಂಗಳಿಗೆ ಕನಿಷ್ಠ 3,500 ನಿಗದಿ ಮಾಡಬೇಕು. ರೈತರು, ಅಸಂಘಟಿತ ಕಾರ್ಮಿಕರು ಸೇರಿದಂತೆ 60 ವರ್ಷ ಮೇಲ್ಪಟ್ಟ ಎಲ್ಲರನ್ನೂ ಸೇರಿಸಬೇಕು. ದೇಶದಲ್ಲಿರುವ ಶೇ.56ರಷ್ಟು ವೃದ್ಧರಿಗೆ ಪಿಂಚಣಿ ಸೌಲಭ್ಯ ಇಲ್ಲ. ಇದರಿಂದ ಇವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೇವಲ ಶೇ.1ರಷ್ಟು ತೆರಿಗೆ ಹೆಚ್ಚಳ ಮಾಡಿದರೂ ದೇಶದ ಪ್ರತಿಯೊಬ್ಬರಿಗೂ ಪಿಂಚಣಿ ಸೌಲಭ್ಯ ಕಲ್ಪಿಸಿಕೊಡಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕುನ್ಹಿ ಕೃಷ್ಣನ್ ಮಾತನಾಡಿ, ಸಾಮಾನ್ಯ ಪಿಂಚಣಿದಾರರಿಗೆ ತಿಂಗಳಿಗೆ 500 ರೂ., ಇಪಿಎಫ್ ಪಿಂಚಣಿದಾರರಿಗೆ 3,500 ರೂ. ಪಿಂಚಣಿ ದೊರೆಯುತ್ತಿದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಇದನ್ನು 10 ಸಾವಿರ ರೂ. ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರವು ಎಲ್ಲ ನಾಗರಿಕರಿಗೆ ಅನ್ವಯವಾಗುವ ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ರೂಪಿಸುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ ಯಾವುದೇ ಹಣ ಹೂಡಿಕೆ ಮಾಡುವುದಿಲ್ಲ. ಜನರೇ ಉಳಿತಾಯ ಮಾಡಬೇಕಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಅದರಲ್ಲಿ ಬರುವ ಲಾಭಾಂಶದಲ್ಲಿ ಪಿಂಚಣಿ ಕೊಡಲು ಮುಂದಾಗಿದೆ. ಆದರೆ, ಪ್ರಸ್ತುತ ಷೇರು ಮಾರುಕಟ್ಟೆ ಕುಸಿತದಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಇದೇ ರೀತಿ ಪಿಂಚಣಿ ಹಣವೂ ಮುಳುಗಿ ಹೋಗಲಿದೆ. ಆಗ ಪಿಂಚಣಿದಾರರ ಗತಿ ಏನು? ಎಂದು ಪ್ರಶ್ನಿಸಿದರು.

ಕಾಲ ಕಾಲಕ್ಕೆ ಪಿಂಚಣಿ ವೇತನವನ್ನು ಪರಿಷ್ಕರಣೆ ಮಾಡಬೇಕು. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದೇಶ ಬಂಡವಾಳದ ಮೇಲಿನ ಅವಲಂಬನೆ ಕಡಿಮೆ ಮಾಡಿ ದೇಶದ ಉಳಿತಾಯ, ಬಂಡಾವಳ ಹೂಡಿಕೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ವಿಶ್ರಾಂತ ಕುಲಪತಿ ಶಬಿತಾ ಭೂಮಿಗೌಡ, ಸಂಘಟನೆಯ ಮುಖಂಡರಾದ ಎನ್.ಪಿ.ಉಮಾಪತಿ, ಎಸ್.ಶ್ರೀಧರ್, ಜಗದೀಶ್, ಬಾಲಾಜಿರಾವ್, ಬಾಲಕೃಷ್ಣ, ಮಹೇಶ್ ಇನ್ನಿತರರಿದ್ದರು