ಮೈಸೂರು: ಸಾರ್ವಜನಿಕ ಸೇವೆಯಲ್ಲಿರುವ ಪೊಲೀಸರಾದ ನಾವು ಹೇಗೆ ವರ್ತನೆ ಮಾಡುತ್ತೇವೆ ಎನ್ನುವುದರ ಮೇಲೆ ಜನರ ವಿಶ್ವಾಸರ್ಹತೆ ಬೆಳೆಯುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್‌ಕುಮಾರ್ ಹೇಳಿದರು.
ಕರ್ನಾಟಕ ಪೊಲೀಸ್ ಅಕಾಡೆಮಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ 46ನೇ ತಂಡದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಸಾರ್ವಜನಿಕರ ಜತೆ ಹೇಗೆ ವರ್ತನೆ ಮಾಡಬೇಕು ಎನ್ನುವುದರ ಬಗ್ಗೆ ತಿಳವಳಿಕೆ ಇರಬೇಕು. ಸಾರ್ವಜನಿಕರ ಜತೆ ನಾವು ಉತ್ತಮವಾಗಿ ವರ್ತಿಸಿದರೆ ಅವರು ಸಹ ನಮಗೆ ಗೌರವವನ್ನು ನೀಡುತ್ತಾರೆ. ವಿನಮ್ರತೆ ಎಂಬುದು ಬಹಳ ಮುಖ್ಯವಾಗುವುದರ ಜತೆಗೆ ಶಿಸ್ತು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಳೆಯ ಪದ್ಧತಿಯನ್ನು ಬಿಟ್ಟು ಆಧುನಿಕತೆಗೆ ಬೇಕಾದಂತೆ ತರಬೇತಿಯನ್ನು ರೂಪಿಸಲಾಗಿದೆ. ಈಗ ಇಲಾಖೆಯಲ್ಲಿ ಯಾವುದು ಮುಖ್ಯ ಅಂತಹ ವಿಷಯಗಳನ್ನು ಪ್ರಸ್ತುತವಾಗಿ ಜಾರಿಗೆ ತಂದಿದ್ದೇವೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನಲ್ಲಿ ಏನೆಲ್ಲಾ ಹೊಸ ವಿಷಯಗಳು ಬರುತ್ತವೆಯೋ ಅವುಗಳನ್ನು ಅಳವಡಿಸಿಕೊಳ್ಳಬೇಕು. ಕಲಿಯುವ ವಿಷಯಗಳಲ್ಲಿ ಬದಲಾವಣೆಯನ್ನು ಮಾಡಿಕೊಂಡು ಪ್ರಸ್ತುತ ನವೀಕರಿಸಿದ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ದೃಢತೆ, ವೃತ್ತಿ ತರಬೇತಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಸಂವಹನವನ್ನು ನಡೆಸಬೇಕು. ಯಾವುದೇ ತರಬೇತಿಯಾದರೂ ಬದ್ಧತೆಯಿಂದ ಭಾಗವಹಿಸಬೇಕು. ನಮ್ಮ ದೇಶದಲ್ಲಿ ತರಬೇತಿ ಉತ್ತಮವಾಗಿ ಇರುವುದರ ಜತೆಗೆ ವಿಧಾನ ಶಾಸ್ತ್ರವು ಚೆನ್ನಾಗಿದೆ. ನಾವು ಪ್ರತಿಯೊಂದು ವಿಷಯದ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕು ಎಂದು ತಿಳಿಸಿದರು.
ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಮಾತನಾಡಿ, ತರಬೇತಿಯಲ್ಲಿ ಮೊದಲು ಶಿಸ್ತು, ದೈಹಿಕ ಸಾಮರ್ಥ್ಯ, ಜ್ಞಾನ, ವ್ಯಕ್ತಿತ್ವವನ್ನು ವೃದ್ಧಿ ಮಾಡಿಕೊಳ್ಳಬೇಕು. ವೃತ್ತಿಪರ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಮಾತನಾಡಿ, ಹೆಚ್ಚು ಜನ ಪೊಲೀಸ್ ಉದ್ಯೋಗಕ್ಕೆ ಸೇರುತ್ತಿರುವುದು ಸಮವಸ್ತ್ರದ ಮೇಲೆ ಹೆಮ್ಮೆ ಇರುವುದರಿಂದ. ಆ ಹೆಮ್ಮೆಯೇ ಪೊಲೀಸರಿಗೆ ಶಕ್ತಿ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಬಹಳ ಮುಖ್ಯವಾಗುತ್ತದೆ. ಅಧಿಕಾರಿಗಳು ಸಮಾಜದಲ್ಲಿ ಸೇವೆಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕೆಪಿಸಿ ಕಲಬುರಗಿಯ ಪ್ರಾಂಶುಪಾಲ ಕಿಶೋರ್‌ಬಾಬು, ಮೈಸೂರಿನ ಗೀತಾ ಪ್ರಸನ್ನ, ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೋಲಿಸ್ ಆಯುಕ್ತ ಮುತ್ತುರಾಜ್ ಇತರರು ಇದ್ದರು.