ಹಾಸನ: ಎಲ್ಲ ಇಲಾಖಾವಾರು ಪ್ರಗತಿಗಳ ಬಗ್ಗೆ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಶಾಸಕ ಎಚ್.ಪಿ. ಸ್ವರೂಪ್ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕರು, ಎಲ್ಲ ಇಲಾಖಾವಾರು ಪ್ರಗತಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರನ್ನು ಕಚೇರಿಗಳಲ್ಲಿ ಕಾಯಿಸದಂತೆ ಹಾಗೂ ತಡ ಮಾಡದಂತೆ ಸಾರ್ವಜನಿಕರನ್ನು ಸೌಜನ್ಯದಿಂದ ನಡೆಸಿಕೊಂಡು ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು ನಿರ್ದೇಶನ ನೀಡಿದರು.
ಈ ಮಾರ್ಚ್ ತಿಂಗಳಿಗೆ 1,157 ಮಕ್ಕಳಿಗೆ 18 ವರ್ಷ ತುಂಬಿದೆ. ಅಂತಹವರಲ್ಲಿ ಯಾರು ಬಾಲ್ಯ ವಿವಾಹ ಆಗಿಲ್ಲ ಅಂತಹವರನ್ನು ಗುರುತಿಸಿ ಬಾಂಡ್ ಮಂಜೂರಾತಿ ಪತ್ರ ಕೊಡಲಾಗುತ್ತಿದೆ. ಪ್ರತಿದಿನ ದಾಖಲಾಗುತ್ತಿದೆ. ಒಂದು ವಾರದೊಳಗೆ 34 ಸಾವಿರ ರೂ. ಅವರ ಖಾತೆಗೆ ಜಮೆ ಆಗುತ್ತದೆ. ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಶಾಸಕರಿಂದ ಈಗ ಮೂರು ಬಾಂಡ್ ವಿತರಣೆ ಮಾಡುತ್ತಿರುವುದಾಗಿ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಶಾಸಕರು ಮಾತನಾಡಿ, ತಾಲೂಕಿನ ಬೈಲಹಳ್ಳಿ ಪಂಚಾಯಿತಿ ಕಾಲಸಮ್ಮನಹಳ್ಳಿ ಗ್ರಾಮದಲ್ಲಿ ಒಬ್ಬರ ಬಳಿಯೂ ಹಕ್ಕು ಪತ್ರ ಇಲ್ಲ. ಹಿಂದೆ ರಾಜಕೀಯ ವ್ಯಕ್ತಿಗಳು ರಾಜಕೀಯ ಮಾಡಿ ಯಾವ ಹಕ್ಕು ಪತ್ರ ನೀಡಿಲ್ಲ. ಈಗಲೇ ತಂದು ಕೊಡಿಸಿ ಎಂದು ತಾಲೂಕು ಪಂಚಾಯಿತ್ಿ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್ ಅವರಿಗೆ ತಾಕೀತು ಮಾಡಿದರು.
ಇದಾದ ನಂತರ ವಿವಿಧ ಇಲಾಖೆಗಳಿಂದ ಮಾಹಿತಿ ಪಡೆಯುತ್ತಾ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಬಗ್ಗೆ ಮಾತನಾಡಿ, ಈ ವರ್ಷ ನಮ್ಮ ಭಾಗದಲ್ಲಿ ಆಲೂಗೆಡ್ಡೆ ಬೆಳೆ ಕಡಿಮೆಯಾಗುತ್ತಿದೆ. ರೈತರು ಕೂಡ ವೈರೆಟಿ ನೋಡಿ ಉಪಯೋಗಿಸುವುದು ಒಳ್ಳೆಯದು. ತೋಟಗಾರಿಕ ಇಲಾಖೆಯಲ್ಲಿ 13 ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾಗಿದೆ. ಆದರೆ 11 ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಉಳಿದ ಎರಡು ತೋಟಗಾರಿಕ ಸಹಾಯಕ ಅಧಿಕಾರಿಗಳ ಹುದ್ದೆಗಳು ಖಾಲಿಯಿದೆ. ಜೇನು ಸಾಕಾಣಿಕೆ ಯೋಜನೆಯಲ್ಲಿ ಶೇಕಡವಾರು ಪ್ರಗತಿ ಸಾಧಿಸಲಾಗಿದ್ದು, ಸಿಎಚ್‌ಡಿ ಯೋಜನೆಯಡಿ ಸಸಿಗಳ ಉತ್ಪಾದನೆ ಹಾಗೂ ಪ್ರದೇಶ ವಿಸ್ತರಣೆ ಹಾಗೂ ತರಬೇತಿ ನಡೆಸಲಾಗಿದ್ದು, ತರಕಾರಿ ಬೀಜಗಳ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪಯೋಜನೆಯಡಿ ಯಾಂತ್ರೀಕರಣ ಕಾರ್ಯಕ್ರಮ ಮತ್ತು ಎಸ್‌ಎಂಎಎಂ ಯೋಜನೆಯಡಿ ಯಾಂತ್ರೀಕರಣ ಕಾರ್ಯಕ್ರಮ ಶೇಕಡ ನೂರರಷ್ಟು ಪ್ರಗತಿ ಸಾಧಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಸಹಾಯಕ ನಿರ್ದೇಶಕ ಗ್ರೇಡ್-1, ಕಚೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆಳಚ್ಚುಗಾರರು, ಜವಾನರು, ವಾರ್ಡನ್, ಜೂನಿಯರ್ ವಾರ್ಡನ್, ಶಿಕ್ಷಕರು, ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು ಸೇರಿ 163 ಹುದ್ದೆಗಳು ಮಂಜೂರಾಗಿದೆ. ಇದುವರೆಗೂ 53 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 110 ಹುದ್ದೆಗಳು ಖಾಲಿ ಇದೆ ಎಂದು ಇಲಾಖೆ ಅಧಿಕಾರಿಗಳು ಅಂಕಿ ಅಂಶ ನೀಡಿದರು. ಇನ್ನು ಅಕ್ಷರ ದಾಸೋಹ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳಿಗೆ ಶಾಸಕರು ಕೆಲ ಸಲಹೆ ನೀಡಿದರು. ಸಿಡಿಪಿಐ ಅಧಿಕಾರಿಗಳಿಂದಲೂ ಕೂಡ ಕೆಲ ಮಾಹಿತಿ ಪಡೆದು ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಮೋಹನ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್ ಇತರರು ಉಪಸ್ಥಿತರಿದ್ದರು.