ಜಿಲ್ಲೆ

ಸಾರ್ವಜನಿಕರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ

ಬೇಲೂರು: ಮಾಧ್ಯಮ ಸಮಾಜದ ಕಣ್ಣುಗಳಿದ್ದಂತೆ. ಆದ್ದರಿಂದ ಪತ್ರಕರ್ತರು ಸಮಾಜವನ್ನು ತಿದ್ದುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಸಲಹೆ ನೀಡಿದರು.

ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಯನಿರತ ಪತ್ರಕರ್ತರ ಸಂಘ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ದೃಶ್ಯ ಮಾಧ್ಯಮದ ಭರಾಟೆಯ ನಡುವೆಯೂ ಪತ್ರಿಕಾ ಮಾಧ್ಯಮ ಸಾರ್ವಜನಿಕರಲ್ಲಿ ಇನ್ನೂ ನಂಬಿಕೆ ಉಳಿಸಿಕೊಂಡಿದೆ. ಜತೆಗೆ ಪತ್ರಕರ್ತರ ವೃತ್ತಿ ಸವಾಲಿನದ್ದಾಗಿದೆ. ಇಲ್ಲಿ ಪತ್ರಕರ್ತರು ಬೆದರಿಕೆ, ಕಷ್ಟ ನಷ್ಟಗಳ ಮಧ್ಯದಲ್ಲಿಯೇ ಚಾಕಚಕ್ಯತೆ ಹೊಂದಿರಬೇಕು. ಸುದ್ದಿಗಳನ್ನು ತ್ವರಿತವಾಗಿ ಕೊಡುವ ಸಂದರ್ಭ ಸತ್ಯಾಸತ್ಯತೆ ಅರಿತು ವರದಿ ಮಾಡಬೇಕು. ಕೆಲವೊಂದು ಸಾರಿ ಸುಳ್ಳು ಸುದ್ದಿಗಳು ಸಮಾಜದ ಮೇಲೆ ದುಷ್ಪರಿಣಾಮಗಳನ್ನು ಬೀರುವುದರಿಂದ ಈ ಬಗ್ಗೆ ಚಿಂತಿಸಬೇಕು. ಸುದ್ದಿ ಬರೆಯುವ ಸಂದರ್ಭ ಕಾನೂನಿನ ಚೌಕಟ್ಟು ಮರೆಯಬಾರದು. ಸುದ್ದಿಗಳು ಸಮಾಜವನ್ನು ಬದಲಾಯಿಸುವಂತಿರಬೇಕು. ಒಂದು ಘಟನೆ ಮತ್ತಷ್ಟು ನಕಾರಾತ್ಮಕ ಘಟನೆಗಳಿಗೆ ಕಾರಣವಾಗಬಾರದು ಎಂದರು.

ಕೆಲಸದ ಒತ್ತಡದ ನಡುವೆಯೂ ಪತ್ರಕರ್ತರು ತಮ್ಮ ಕುಟುಂಬಕ್ಕೆ ಸಮಯ ನೀಡಬೇಕು, ಸಮಾಜಮುಖಿ ಕೆಲಸದ ಜತೆಗೆ ಕುಟುಂಬದ ನಿರ್ವಹಣೆಯೂ ನಿಮ್ಮ ಕರ್ತವ್ಯವಾಗಿದ್ದು, ಆಗ ಮಾತ್ರ ವೃತ್ತಿ ಮತ್ತು ಕುಟುಂಬ ಎರಡಕ್ಕೂ ಸಮಾನ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ ಎಂದರು.

ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ಮಾತನಾಡಿ, ಪತ್ರಕರ್ತರು ವಾಸ್ತವವಾಗಿ ನೈಜ ಸುದ್ದಿ ಬಿತ್ತರಿಸಿದಾಗ ಪ್ರತಿಯೊಬ್ಬರ ಕರ್ತವ್ಯವನ್ನು ಎಚ್ಚರಿಸಿದಂತಾಗುತ್ತದೆ. ಜತೆಗೆ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ದೃಶ್ಯ ಮಾಧ್ಯಮಗಳಲ್ಲಿ ತಕ್ಷಣ ಪ್ರಟಿಸುವ ಸುದ್ದಿಯನ್ನು ಪರಿಶೀಲಿಸಬೇಕು. ಯೂಟ್ಯೂಬ್ ಚಾನಲ್‌ಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ನಕಲಿ ಪತ್ರಕರ್ತರ ಬಗ್ಗೆ ಸಂಘ ಎಚ್ಚರ ವಹಿಸಬೇಕು. ಅವರ ವಿರುದ್ಧ ಕಾನೂನು ಕ್ರಮವಾದಾಗ ಮಾತ್ರ ಎಲ್ಲರಿಗೂ ನ್ಯಾಯ ಕೊಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಂಘ ಕ್ರಮಕ್ಕೆ ಮುಂದಾಗಬೇಕು ಎಂದರು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಮಾತನಾಡಿ, ಪತ್ರಕರ್ತರು ದಿನನಿತ್ಯ ಒತ್ತಡದ ನಡುವೆ ಕೆಲಸ ಮಾಡುತ್ತಾರೆ. ಅವರು ಅನಾರೋಗ್ಯಕ್ಕೆ ತುತ್ತಾದರೆ ಅವರಿಗೆ ಸಹಾಯ ನೀಡಲು ಸಂಘದಲ್ಲಿ ಆರೋಗ್ಯ ನಿಧಿ ಪ್ರಾರಂಭಿಸಿದ್ದು, ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಎರಡು ಲಕ್ಷ ರೂ., ಎಚ್‌ಡಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ 1ಲಕ್ಷ ರೂ. ಹಾಗೂ ಪತ್ರಿಕಾಗೋಷ್ಠಿಯಿಂದ ಬಂದ ಒಂದು ಲಕ್ಷ ರೂ.ಸೇರಿದತೆ 5 ಲಕ್ಷ ರೂ.ಹಣ ಶೇಖರಿಸಿದ್ದು, ಈ ಹಣವನ್ನು ಬೇರೆ ಕಾರ್ಯಕ್ರಮಗಳಿಗೆ ಬಳಸದೆ ಪತ್ರಕರ್ತರ ಆರೋಗ್ಯಕ್ಕಾಗಿ ಮೀಸಲಿಡಲಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಸಿ.ಎಂ.ಪೃಥ್ವಿ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಪುಟ್ಟಸ್ವಾಮಿಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಪತ್ರಕರ್ತರಾದ ಹೆಬ್ಬಾಳು ಹಾಲಪ್ಪ, ರಾಘವೇಂದ್ರ ಹೊಳ್ಳ, ಬಿ.ಎಲ್.ಲಕ್ಷ್ಮಣ್, ಕುಮಾರ್, ಗಣೇಶ್, ವಿಜಯ್ ಕುಮಾರ್, ನಾಗೇಶ್, ಮಹೇಶ್, ರಮೇಶ್, ನಿಂಗರಾಜು, ದೀಪು, ರಂಜಿತ್ ಮತ್ತಿತರರಿದ್ದರು.