ಸೋಮವಾರಪೇಟೆ: ಪೊಲೀಸ್ ಇಲಾಖೆ ವತಿಯಿಂದ ಶ್ರೀ ಗೌರಿ-ಗಣೇಶ ಹಬ್ಬದ ಆಚರಣೆ ಹಾಗೂ ವಿಸರ್ಜನೆಯ ಅಂಗವಾಗಿ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಪೂರ್ವಭಾವಿ ಸಭೆಯನ್ನು ಶನಿವಾರ ಸಂಜೆ ಪತ್ರಿಕಾಭವನ ಸಭಾಂಗಣದಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‌ಪಿ ಗಂಗಾಧರಪ್ಪ ಮಾತನಾಡಿ, ಗಣಪತಿ ಆಚರಣಾ ಸಮಿತಿಯವರು ಸಾರ್ವಜನಿಕರಿಂದ ಒತ್ತಾಯಪೂರ್ವಕವಾಗಿ ಚಂದಾ ವಸೂಲಿ ಮಾಡಬಾರದು. ಅಂತಹ ದೂರುಗಳು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೊದಲು ಸೆಸ್ಕ್, ಅಗ್ನಿಶಾಮಕ ಇಲಾಖೆಯವರಿಂದ ಅನುಮತಿ ಪಡೆಯಬೇಕು. ಸಾರ್ವಜನಿಕ ರಸ್ತೆಯಲ್ಲಿ ವಾಹನ ಮತ್ತು ಜನರು ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಪ್ರತಿಷ್ಠಾಪನೆ ಮಾಡಬಾರದು ಎಂದು ಹೇಳಿದರು.
ಖಾಸಗಿ ಮನೆ, ಅಂಗಡಿ, ದೇವಸ್ಥಾನ ಅಥವಾ ನೇರ ವಿದ್ಯುತ್ ಲೈನ್ ಮತ್ತು ಇನ್ನಾವುದೇ ರೀತಿ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಬಾರದು, ಪ್ರತಿ ಗಣೇಶ ಮಂಡಳಿಯ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಪಟ್ಟಿಯನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ಮುಂಚಿತವಾಗಿ ಸಲ್ಲಿಸಬೇಕು. ಸಂಘಟಕರು ಗಣಪತಿ ಮೂರ್ತಿಗಳ, ಫ್ಲೆಕ್ಸ್ ಬ್ಯಾನರ್‌ಗಳು ಹಾಗೂ ಇತರ ಸಾಮಗ್ರಿಗಳ ಸುರಕ್ಷತೆ ಕುರಿತಂತೆ ಎಚ್ಚರದಿಂದ ಇರಬೇಕು. ಗಣಪತಿ ಮೂರ್ತಿಗಳಿಗೆ ಬಂಗಾರದ ಆಭರಣಗಳನ್ನು ಹಾಕಿದ್ದಲ್ಲಿ ಅದರ ಸುರಕ್ಷತೆಯ ಜವಾಬ್ದಾರಿ ಗಣಪತಿ ಮಂಡಳಿಯವರದ್ದೇ ಆಗಿರುತ್ತದೆ ಎಂದರು.
ಭದ್ರತೆ ದೃಷ್ಟಿಯಿಂದ ಗಣಪತಿ ಮಂಡಳಿಯವರು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಡಿಜೆ ಬಳಕೆ ಮಾಡುವಂತಿಲ್ಲ. ಮಾಡಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕ ಪರವಾನಗಿ ಪಡೆಯಬೇಕು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಮಾತ್ರ ಬಳಕೆ ಮಾಡಬೇಕು. ಅನ್ಯ ಧರ್ಮೀಯರಿಗೆ ಘಾಸಿಯಾಗುವಂತಹ ಸಂಭಾಷಣೆ ಹಾಡುಗಳನ್ನು ಹಾಕಬಾರದು. ಗಣೇಶ ಪ್ರತಿಷ್ಠಾಪನೆ ದಿನ, ಕಾರ್ಯಕ್ರಮಗಳ ವಿವರವನ್ನು ಮುಂಚಿತವಾಗಿ ಸರಹದ್ದಿನ ಪೊಲೀಸ್ ಠಾಣೆಗೆ ಸಲ್ಲಿಸಬೇಕು. ಗಣೇಶ ಮಂಟಪದ ಬಳಿ ಬೆಳಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ತಲಾ ಒಬ್ಬರಂತೆ ಕಡ್ಡಾಯವಾಗಿ ಇದ್ದು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಣೇಶ ಮಂಟಪ ಸಮೀಪ ಯಾವುದೇ ಸಣ್ಣಪುಟ್ಟ ಜಗಳ ವಾಗ್ವಾದ ಮುಂತಾದ ಘಟನೆಗಳು ಜರುಗಿದಲ್ಲಿ ಗಣೇಶ ಮಂಡಳಿಯವರು ಕೂಡಲೇ ಸರಹದ್ದಿನ ಪೊಲೀಸ್ ಠಾಣೆಗೆ ತಿಳಿಸಬೇಕು.
ಗಣಪತಿ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಪ್ರಚೋದನಕಾರಿ ಘೋಷಣೆ ಕೂಗುವುದು ಅಥವಾ ಗೀತೆಗಳು ಮತ್ತು ಭಾಷಣಗಳನ್ನು ಮಾಡಬಾರದು. ಗಣಪತಿ ವಿಸರ್ಜನೆಯ ದಿನಾಂಕ, ವೇಳೆ, ಮಾರ್ಗ ಮುಂತಾದ ವಿವರಗಳನ್ನು ಮುಂಚಿತವಾಗಿ ಸಂಬಂಧಿಸಿದ ಪೊಲೀಸ್ ಇಲಾಖೆಗೆ ತಿಳಿಸಬೇಕು. ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ ಇದ್ದರು.