ಜಿಲ್ಲೆ

ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ವ್ಯಾಪಾರ ಮಾಡಿ

ಚನ್ನರಾಯಪಟ್ಟಣ: ಸಾರ್ವಜನಿಕರಿಗೆ ತೊಂದರೆ ಹಾಗೂ ಕಿರಿಕಿರಿಯಾಗದಂತೆ ತಮ್ಮ ವ್ಯಾಪಾರ ಮಾಡಬೇಕು. ತಮ್ಮ ವ್ಯಾಪಾರದ ಸ್ಥಳದಲ್ಲಿಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಬೀದಿಬದಿ ವ್ಯಾಪಾರಿಗಳಿಗೆ ಹೇಳಿದರು.


ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿಗಳ ಸ್ವನಿಧಿ ಯೋಜನೆಯಡಿ ಸಾಲ ವಿತರಣೆ ಹಾಗೂ ಪರಿಚಯ ಪತ್ರ ವಿತರಣೆ ಮಾಡಿ ಮಾತನಾಡಿದರು.


ಶೇ.30 ರಷ್ಟು ಬೀದಿಬದಿ ವ್ಯಾಪಾರಿಗಳಿಂದ ಸಂಚಾರಿ ನಿಯಮಗಳ ಉಲ್ಲಂಘನೆಯಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸಿಕೊಂಡು ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದರು. ಪಟ್ಟಣದಲ್ಲಿ 404 ಮಂದಿ ಬೀದಿಬದಿ ವ್ಯಾಪಾರಿಗಳು ನೋಂದಣಿಯಾಗಿದ್ದು, ಮೊದಲ ಸಾಲಿನಲ್ಲಿ 350 ಮಂದಿಗೆ ತಲಾ 10 ಸಾವಿರ ರೂ. ನಂತೆ 35 ಲಕ್ಷ ರೂ. ಸ್ವನಿಧಿ ಯೋಜನೆಯಡಿ ಈ ಮೊದಲೇ ಸಾಲ ನೀಡಲಾಗಿತ್ತು ಎಂದು ತಿಳಿಸಿದರು.


ಇವರಲ್ಲಿ 255 ಮಂದಿ ಪ್ರಾಮಾಣಿಕವಾಗಿ ಸಾಲ ತೀರುವಳಿ ಮಾಡಿರುವುದರಿಂದ ಇದೀಗ ತಲಾ 20 ಸಾವಿರ ರೂ.ನಂತೆ 45 ಲಕ್ಷ ರೂ. ಹಾಗೂ ಇಬ್ಬರಿಗೆ ತಲಾ 50 ರೂ.ನಂತೆ ಸಾಲ ನೀಡಲಾಗುತ್ತಿದೆ. ಇದನ್ನು ವ್ಯಾಪಾರಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಯೋಜನೆ ಜಾರಿಗೂ ಮುನ್ನ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆಯೇ ಬಡವರ ಬಂಧು ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡಿದರು ಎಂದರು. ಡಿಸಿಸಿ ಬ್ಯಾಂಕ್ ಮೂಲಕ ಸ್ವಸಹಾಯ ಗುಂಪುಗಳಿಗೆ 45 ಕೋಟಿ ರೂ. ಸಾಲ ನೀಡಲಾಗಿದೆ. ನೀವುಗಳು 10 ಜನರ ಗುಂಪು ರಚಿಸಿಕೊಂಡು ಪಿಎಸಿಸಿಎಸ್‌ನಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ 3 ಲಕ್ಷ ರೂ.ವರೆಗೆ ವಾರ್ಷಿಕ ಶೇ.12ರಂತೆ ಸಾಲ ನೀಡಲಾಗುವುದು ಎಂದು ತಿಳಿಸಿದರು.


ಪುರಸಭಾ ಅಧ್ಯಕ್ಷೆ ರಾಧಾ ಮಂಜುನಾಥ್, ಉಪಾಧ್ಯಕ್ಷೆ ಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ಸದಸ್ಯರಾದ ಸುಜಾತ, ನಂಜುಂಡಮೈಮ್, ಧರಣಿ, ಜಗದೀಶ್, ಮುಖ್ಯಾಧಿಕಾರಿ ಹೇಮಂತ್‌ಕುಮಾರ್, ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಸಿ.ಎನ್.ಮಂಜುನಾಥ್ ಹಾಗೂ ಇತರರು ಇದ್ದರು.