ಜಿಲ್ಲೆ

ಸಾರ್ವಜನಿಕರಿಗೆ ಕಿರಿಕಿರಿ ಮಾಡಿದ್ರೆ ಸೂಕ್ತ ಕ್ರಮ

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ, ತೆರಿಗೆ ಇಲಾಖೆ ಸೇರಿ ವಿವಿಧೆಡೆ ಸರ್ಕಾರಿ ಕಚೇರಿಗಳಿಗೆ ಗುರುವಾರ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ನೇತೃತ್ವದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಬುಧವಾರದಿಂದ ಸರ್ಕಾರಿ ಆಸ್ಪತ್ರೆ, ಸಬ್ ರಿಜಿಸ್ಟ್ರಾರ್, ವಸತಿನಿಲಯ, ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಸ್ಮಾರ್ಟ್ ಸಿಟಿ ಕಚೇರಿ, ಪಾಲಿಕೆಯ ವಿವಿಧ ಭಾಗಗಳ ಕಚೇರಿ ಅಧಿಕಾರಿಗಳಿಂದ ಅಭಿವೃದ್ಧಿ ಕಾಮಗಾರಿ, ಅನುದಾನ ಬಳಕೆ ಕುರಿತು ಮಾಹಿತಿ ಪಡೆದರು.

ವಿವಿಧ ಸಮಸ್ಯೆ ಪರಿಹಾರಕ್ಕಾಗಿ ಕಚೇರಿಗಳಿಗೆ ಆಗಮಿಸುವ ಜನರಿಗೆ ತಕ್ಷಣವೇ ಸ್ಪಂದಿಸಬೇಕು. ಸಾರ್ವಜನಿಕರ ಕೆಲಸಗಳಿಗೆ ಕಿರಿಕಿರಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸವದತ್ತಿ ವರದಿ: ಪಟ್ಟಣದ ವಿವಿಧ ಇಲಾಖೆ ಕಚೇರಿಗಳಿಗೆ ರಾಜ್ಯ ಲೋಕಾಯುಕ್ತ ತಂಡದ ಅಧಿಕಾರಿಗಳು ಗುರುವಾರ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿದರು. ಇಲ್ಲಿನ ತಾಲೂಕಾಸ್ಪತ್ರೆಗೆ ಭೇಟಿ ನೀಡಿ, ಔಷಧ ಉಗ್ರಾಣ ಸೇರಿ ವಿವಿಧ ವಿಭಾಗಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.

ಸ್ಪತ್ರೆಯಲ್ಲಿ ಸಿಸಿಟಿವಿ ಹಾಗೂ ಪ್ರತಿ ವಿಭಾಗಕ್ಕೆ ನಾಮಲಕ ಅಳವಡಿಸುವಂತೆ ಸೂಚಿಸಿದರು. ಬಳಿಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ನೇತೃತ್ವದಲ್ಲಿ ಅಪರ ನಿಬಂಧಕರಾದ ವೆಂಕಟೇಶ ಯಡಳ್ಳಿ, ಅಡಿವೇಶ ಬೂದಿಗೊಪ್ಪ, ರಮೇಶ ಕಾಂಬಳೆ ಕರಿಕಟ್ಟಿ ಗ್ರಾಮದ ಅಂಗನವಾಡಿ, ಪುರಸಭೆ ಸೇರಿ ವಿವಿಧ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಕೊಠಡಿ ಹಾಗೂ ದಾಖಲಾತಿ ಪರಿಶೀಲನೆ ಮಾಡಿದರು.