ನರಗುಂದ: ಪಟ್ಟಣದ ಬಸವೇಶ್ವರ ಸಮುದಾಯ ಭವನವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡುವ ನಿರ್ಧಾರ ಕೈಬಿಡುವಂತೆ ಆಗ್ರಹಿಸಿ ಸರ್ವಜ್ಞ ಸರ್ಕಲ್, ಸೋಮಾಪುರ ಬಡಾವಣೆಯ ಸಾರ್ವಜನಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಚನ್ನಬಸಪ್ಪ ಕಂಠಿ ಮಾತನಾಡಿ, ಬಸವೇಶ್ವರ ಸಮುದಾಯ ಭವನದ ಹತ್ತಿರದಲ್ಲಿರುವ ಎಸ್ಬಿಐ, ಪಿಎಲ್ಡಿ ಬ್ಯಾಂಕ್ಗಳಿಗೆ ಸಾವಿರಾರು ಗ್ರಾಹಕರು ಆಗಮಿಸುತ್ತಾರೆ. ಪುರಸಭೆ, ತರಕಾರಿ ಮಾರುಕಟ್ಟೆ ಪ್ರದೇಶಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಸಮುದಾಯ ಭನವನ ಇರುವುದರಿಂದ ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತದೆ. ಅಲ್ಲದೆ, ಸುತ್ತಮುತ್ತ ಖಾಸಗಿ ಆಸ್ಪತ್ರೆ, ಶಾಲೆಗಳು, ಹಲವು ಬಡಾವಣೆಗಳಿರುವುದರಿಂದ ಇಲ್ಲಿ ಕೋವಿಡ್ ಆಸ್ಪತ್ರೆ ರ್ವಿುಸುವುದು ಸೂಕ್ತವಲ್ಲ ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ ಮಾತನಾಡಿ, ತಾಲೂಕಿನ ಕರೊನಾ ಶಂಕಿತರಿಗಾಗಿ ತಾಲೂಕಿನ ಬೆಳ್ಳೇರಿ ಕೃಷಿ ಡಿಪ್ಲೊಮಾ ಕಾಲೇಜು, ಭೈರನಹಟ್ಟಿ ಬಂಡೆಮ್ಮ ನಗರದ ಸರ್ಕಾರಿ ಶಾಲೆ, ಬೆನಕನಕೊಪ್ಪ ಮುರಾರ್ಜಿ ವಸತಿ ಶಾಲೆ ಸೇರಿ ವಿವಿಧೆಡೆ ಕ್ವಾರಂಟೈನ್ ಕೇಂದ್ರ ಮಾಡಲು ನಿರ್ಧರಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಇಲ್ಲಿನ ಬಸವೇಶ್ವರ ಸಮುದಾಯ ಭವನವನ್ನು ಹೆಚ್ಚುವರಿ ಕೋವಿಡ್ ಆಸ್ಪತ್ರೆಯಾಗಿ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಆತಂಕ ಪಡಬಾರದು ಎಂದು ಹೇಳಿದರು. ನಂತರ ಜನರು ಪ್ರತಿಭಟನೆ ಹಿಂಪಡೆದರು.
ಶಂಕ್ರಣ್ಣ ವಾಳದ, ಸಿ.ಎಚ್. ಕೋರಿ, ಬಸವರಾಜ ಸಾಬಳೆ, ವಿ.ಎನ್. ಕೊಳ್ಳಿಯವರ, ಚನ್ನು ನಂದಿ, ಗೋವಿಂದಪ್ಪ ನೀರಲಕೇರಿ, ತುಳಜಪ್ಪ ಸಾಬಳೆ, ರಾಘವೇಂದ್ರ ಗುಜಮಾಗಡಿ, ಸೀಮಣ್ಣ ಗೊವೇಶ್ವರ, ಕರಬಸಪ್ಪ ಹಸಬಿ, ಕರಿಮಸಾಬ ಟಾಸಗಾಂವ್, ರಾಜು ಜವಳಿ, ಎಸ್.ವೈ. ಹುಂಬಿ, ಅಜಯ ಮೋರೆ, ಬಡೇಸಾಬ ನದಾಫ್ ಇತರರಿದ್ದರು.