ಚಿಟಗುಪ್ಪ: ಪಟ್ಟಣದಲ್ಲಿನ ಸಾರ್ವಜನಿಕರ ಸಮಸ್ಯೆಗಳಿಗೆ ಪುರಸಭೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ದೂರು ಬರದಂತೆ ಅಗತ್ಯ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಎಚ್ಚರಿಕೆ ನೀಡಿದರು.
ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ಪುರಸಭೆ ಅಧ್ಯಕ್ಷೆ ರೋಜಮ್ಮ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯ ಎಸ್‌ಎಫ್‌ಸಿ ಮತ್ತು ೧೫ನೇ ಹಣಕಾಸು ಯೋಜನೆ ಮತ್ತು ಎಸ್‌ಡಬ್ಲ್ಯೂಎಂಗೆ ಸಂಬಂಧಿಸಿದ ಕಾಮಗಾರಿಗಳನ್ನು ಸರ್ಕಾರದ ನಿಯಮಾವಳಿಯಂತೆ ಟೆಂಡರ್ ಮೂಲಕ ಕರೆದು ಗುಣಮಟ್ಟದ ಕೆಲಸ ಮಾಡಲು ಮುಖ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣದ ಪ್ರತಿಯೊಂದು ವಾರ್ಡ್ಗಳಿಗೆ ವಾರದಲ್ಲಿ ೨ ದಿನವಾದರರೂ ವಾರ್ಡಿನ ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಪರಿಹಾರವನ್ನು ಒದಗಿಸಿ ಕೊಡಲು ತಾಕೀತು ಮಾಡಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಿಂದ ಬೌದ್ಧ ಮಂದಿರ (ಪಂಚಾಕ್ಷರಿ ಶಾಲೆ)ವರೆಗಿನ ರಸ್ತೆಗೆ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಿ ಬೋರ್ಡ್ ಅಳವಡಿಸಬೇಕು ಮತ್ತು ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ಇತರೆ ಕಾಮಗಾರಿಗಳ ಕುರಿತು ಸದಸ್ಯರು ಚರ್ಚೆ ಮಾಡಿದರು.
ಕೊಳಗೇರಿ ಅಭಿವೃದ್ಧಿ ನಿಗಮದಿಂದ ಅನುಮೋದನೆಗೊಂಡಿರುವ ೫೪೫ ಮನೆಗಳ ನಿರ್ಮಾಣದ ಪ್ರಗತಿ ಕುರಿತು ಚರ್ಚೆ ಮಾಡಲು ಸಂಬಂಧಿಸಿದ ನಿಗಮ ಮಂಡಳಿ ಅಧಿಕಾರಿಗಳು ಸಭೆಗೆ ಹಾಜರಾಗದೆ ಇರುವುದರಿಂದ ನೋಟಿಸ್ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪುರಸಭೆಯ ಅಧ್ಯಕ್ಷ ರೋಜಮ್ಮ ತಿಪ್ಪಣ್ಣ, ಉಪಾಧ್ಯಕ್ಷ ಮೀರ್‌ಮುಜಾಫರ್ ಮಾಲಿ ಪಟೇಲ್, ಮುಖ್ಯಾಧಿಕಾರಿ ಹುಸಾಮುದ್ದೀನ್ ಬಾಬಾ, ಸದಸ್ಯರಾದ ದಿಲೀಪಕುಮಾರ ಬಗ್ದಲಕರ, ರಹೇಮಾನ್ ಪಾಶಾ, ವಿಶಾಲ ಬೋರಳೆ, ರೇವಣಸಿದ್ದಪ್ಪ ಭೂತಾಳೆ, ನಸೀರ್ ಖಾನ್, ಮಹ್ಮದ್ ಹಬೀಬ್ ಅಹ್ಮದ್, ರಾಜದೀಪ ಜಾಬಾ, ಕ್ರಿಸ್ತಾನಂದ, ಶಮಾ ಬೇಗಂ, ಸೌಭಾಗ್ಯವತಿ ಅಶೋಕ ಸ್ವಾಮಿ, ಲಕ್ಷ್ಮೀ, ಜಲೀಸಾ ಬೇಗಂ, ಲಕ್ಷ್ಮೀಬಾಯಿ ಗಡಮಿ, ಮಹ್ಮದ್ ನಸೀರ ಹಕ್ಕಿಂ, ಮಹ್ಮದ್ ನಿಸಾರೋದ್ದಿನ್, ಶಶಿಕಲಾ, ಪಾರ್ವತಿ ರಮೇಶ ಇದ್ದರು.