ಸಂಡೂರು: ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಪಟ್ಟಣದಲ್ಲಿ ಎಐಯುಟಿಯುಸಿ ವತಿಯಿಂದ ಮೆರವಣಿಗೆ ನಡೆಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿ, ಕೇಂದ್ರ ಸರ್ಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಿದೆ. ಶ್ರಮ ಜೀವಿಗಳ ಜೀವನೋಪಾಯದ ಮೇಲೆ ದಾಳಿ ಮಾಡುತ್ತಿದೆ. ಇದೀಗ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ದುಡಿಯುವ ಜನರ ಮೇಲೆ ಒತ್ತಾಯಪೂರ್ವವಕಾಗಿ ಹೇರುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕ ವಿರೋಧಿ ಹಾಗೂ ಬಂಡವಾಳಶಾಹಿ ಪರ ಇರುವ ಕಾರ್ಮಿಕ ಸಂಹಿತೆ ಕಾಯ್ದೆ ರದ್ದಾಗಬೇಕು. ವಿಮೆ, ಬ್ಯಾಂಕ್, ರೈಲ್ವೆ, ಮುಂತಾದ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ನಿಲ್ಲಬೇಕು. ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರು ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮಾಡುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ಕಾರ್ಪೋರೇಟ್ ವ್ಯವಹಾರ ನಡೆಸುವವರು ಕಾಯ್ದೆಗಳನ್ನು ಉಲ್ಲಂಘನೆ ಮಾಡಲು ಮುಕ್ತ ಅವಕಾಶ ಕಲ್ಪಿಸುತ್ತಿದೆ. ರಾಜ್ಯ ಸರ್ಕಾರ ದುಡಿಯುವ ಅವಧಿಯನ್ನು ಹೆಚ್ಚಳ ಮಾಡಿದೆ. ಮಹಿಳೆಯರಿಗೆ ರಾತ್ರಿ ಪಾಳಿ ಜಾರಿಗೆ ತಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಸಂಪೂರ್ಣ ಕಾರ್ಮಿಕ ವಿರೋಧಿಯಾಗಿವೆ ಎಂದು ದೂರಿದರು.
ಸಂಯುಕ್ತ ಗಣಿ ಕಾರ್ಮಿಕ ಸಂಘದ ಹುಲಿಗೇಶ್, ಬಾಬು, ಸಂತೋಷ್, ಕೃಷ್ಣಪ್ಪ, ಮಂಜುನಾಥ್, ಕೊಟ್ರೇಶ್, ತಿಮ್ಮಣ್ಣ, ಬಸವರಾಜ್, ಅಂಬರೀಷ್, ಆಶಾ ಕಾರ್ಯಕರ್ತೆಯರ ಸಂಘದ ಜಲಜಾಕ್ಷಿ, ವೀರಮ್ಮ, ಕಟ್ಟಡ ಕಾರ್ಮಿಕ ಸಂಘದ ಪ್ರಮುಖರಿದ್ದರು.