ದಾವಣಗೆರೆ: ಸಿದ್ದೇಶ್ವರ ಸ್ವಾಮೀಜಿ ಸಾರ್ವಜನಿಕ ಬದುಕಿನ ಮೌಲ್ಯಗಳನ್ನು ಕಲಿಸಿದ ಗುರುಗಳು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ, ಎಂ.ಬಿ.ಎ.ಕಾಲೇಜು ಆವರಣದ ಮಹಾಸಭಾದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿದ್ದೇಶ್ವರ ಸ್ವಾಮೀಜಿಗಳ ಸ್ಮರಣೆಯ ಸಭೆಯಲ್ಲಿ ಮಾತನಾಡಿದರು.
ಸಮಯಕ್ಕೆ ಮಹತ್ವ ಕೊಟ್ಟಿದ್ದ ಸಿದ್ದೇಶ್ವರ ಸ್ವಾಮೀಜಿ, ಕರಾರುವಕ್ಕಾಗಿ ಒಂದು ಗಂಟೆ ಮಾತ್ರವೇ ಪ್ರವಚನ ನಡೆಸಿಕೊಡುತ್ತಿದ್ದರು. ದೇಶ-ವಿದೇಶಗಳಲ್ಲಿಯೂ ಪ್ರವಚನ ನೀಡಿ ಹೆಸರುವಾಸಿಯಾಗಿದ್ದಾರೆ. ಸರ್ಕಾರದ ಎಲ್ಲ ಪ್ರಶಸ್ತಿಗಳನ್ನು ನಿರಾಕರಿಸಿ ಕೆಲಸ ಮಾಡಿದರು ಎಂದರು.
ನಡೆದಾಡುವ ದೇವರಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡಿದರು. ಎಲ್ಲ ಸ್ವಾಮೀಜಿಗಳು ಖಾವಿ ಬಟ್ಟೆ ಧರಿಸಿದರೆ, ಸಿದ್ದೇಶ್ವರ ಸ್ವಾಮೀಜಿಗಳು ಬಿಳಿ ಬಟ್ಟೆ ತೊಟ್ಟು ಗಮನ ಸೆಳೆಯುತ್ತಿದ್ದರು. ಯಾರಿಗೂ ಉಪದ್ರವ ನೀಡದೆ ತಮ್ಮ ಬಟ್ಟೆಯನ್ನೇ ತಾವೇ ತೊಳೆದುಕೊಳ್ಳುತ್ತಿದ್ದ ಸರಳ ಜೀವಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ ಸಿದ್ದೇಶ್ವರ ಸ್ವಾಮೀಜಿ, ಸಾಮಾನ್ಯರ ಸಮಸ್ಯೆಗಳಿಗೆ ಸರಳ ಪರಿಹಾರ ಕೊಟ್ಟ ಮಹಾತ್ಮರು. ಧರ್ಮದ ಚೌಕಟ್ಟನ್ನು ಮೀರಿ ತತ್ವಗಳ ಮೇಲೆ ನಿಂತವರು. ಸಮಾಜದಲ್ಲಿ ಮೌಲ್ಯಗಳನ್ನು ಜೀವಂತವಾಗಿಡಲು ಅವರ ಆದರ್ಶದ ಬದುಕು ಅವಶ್ಯಕತೆ ಇದೆ ಎಂದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶುಭಾ ಐನಳ್ಳಿ ಮಾತನಾಡಿ ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಆಲಿಸಿದವರ ಜೀವನವೇ ಬದಲಾವಣೆಯಾಗಿದೆ. ಅವರ ಮಾತುಗಳು ಮಂದಿನ ಪೀಳಿಗೆಗೂ ಮಾರ್ಗದರ್ಶಕವಾಗಬೇಕು ಎಂದು ತಿಳಿಸಿದರು.
ಮಹಿಳಾ ಘಟಕದ ಶಶಿಕಲಾ ಮೂರ್ತಿ ಮಾತನಾಡಿ ಸಿದ್ದೇಶ್ವರ ಸ್ವಾಮೀಜಿ ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರ ಸಂದೇಶಗಳು ಅಜರಾಮರವಾಗಿ ಉಳಿದಿವೆ. ಸಮಾಜದಿಂದ ಏನನ್ನೂ ಅಪೇಕ್ಷಿಸಬಾರದು, ಮನಸ್ಸನ್ನು ಮೊದಲು ಕಟ್ಟಬೇಕು ಎಂಬುದಾಗಿ ಹೇಳಿದ್ದರು ಎಂದು ಸ್ಮರಿಸಿದರು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ಎಸ್.ಎಸ್.ಗಣೇಶ್, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷ ಸಂದೀಪ್ ಅಣಬೇರು, ಸಮಾಜದ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಐಗೂರು ಚಂದ್ರಶೇಖರ್, ಕೆ.ಆರ್. ಸಿದ್ದೇಶ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಬಿ.ಜೆ, ಬುಳ್ಳಾಪುರ ವಿಶ್ವನಾಥ್, ಪುಷ್ಪಾ ವಾಲಿ, ದಿನೇಶ್ ಕೆ.ಶೆಟ್ಟಿ ಇತರರಿದ್ದರು