ಜಿಲ್ಲೆ

ಸಾರ್ವಜನಿಕ ದಾಖಲೆ ದೇಶದ ಸ್ವತ್ತು: ಡಾ.ಜೆ.ವಿ.ಗಾಯತ್ರಿ

ಮೈಸೂರು: ಮಹತ್ವದ ಸಾರ್ವಜನಿಕ ದಾಖಲೆಗಳು ದೇಶದ ಸ್ವತ್ತು. ಅವುಗಳನ್ನು ಸಂರಕ್ಷಣೆ ಮಾಡಬೇಕು ಎಂದು ಪತ್ರಗಾರ ಇಲಾಖೆಯ ನಿವೃತ್ತ ಉಪನಿರ್ದೇಶಕಿ ಡಾ.ಜೆ.ವಿ.ಗಾಯತ್ರಿ ಹೇಳಿದರು.

ವಿಶ್ವೇಶ್ವರನಗರದಲ್ಲಿರುವ ರಾಜ್ಯ ಪತ್ರಗಾರ ಇಲಾಖೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ದಾಖಲೆಗಳ ಅಧಿನಿಯಮ ಮತ್ತು ದಾಖಲೆಗಳ ನಿರ್ವಹಣೆಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇತಿಹಾಸ, ಚರಿತ್ರೆ ಘಟನೆಯ ಪ್ರತಿಪಾದನೆಗೆ ದಾಖಲೆಗಳು ಸಹಾಯಕ್ಕೆ ಬರುತ್ತವೆ. ಹೀಗಾಗಿ, ಆಧಾರ್, ಪ್ಯಾನ್ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ಸಂರಕ್ಷಣೆ ಮಾಡುವಂತೆ ಮಹತ್ವ ಸಾರ್ವಜನಿಕ ದಾಖಲೆಗಳನ್ನೂ ರಕ್ಷಣೆ ಮಾಡಬೇಕು ಎಂದರು.

ಈಗಿನ ಕಡತ ಭವಿಷ್ಯದ ದಾಖಲೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜತೆಗೆ ಸಂರಕ್ಷಣೆಗೂ ಕ್ರಮ ವಹಿಸಬೇಕು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ದಾಖಲೆಗಳನ್ನು ಸ್ಕಾೃನ್ ಮಾಡಿ ಡಿಜಿಟಲ್ ರೂಪದಲ್ಲಿ ಕಾಯ್ದಿರಿಸಬೇಕು ಎಂದರು.

ಪುರಾತನ ದಾಖಲೆಗಳು ಬಹಳಷ್ಟು ಸಲ ಸಾಕ್ಷಿಯಾಗಿವೆ. ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂಬುದನ್ನು ಸಾಬೀತುಪಡಿಸಿದ್ದು ಸಾರ್ವಜನಿಕರ ದಾಖಲೆಯೇ ‘ಅಯೋಧ್ಯ ರಾಮನ ಜನ್ಮ ಭೂಮಿ’ ಎಂಬ ಅಂಶದ ಉಲ್ಲೇಖ ಕ್ರಿ.ಶ.1105ರ ಶಾಸನದಲ್ಲೇ ಇತ್ತು. 5*6 ಅಡಿಯ ಈ ಶಾಸನದ ದಾಖಲೆಯನ್ನು ಮೈಸೂರಿನ ಶಾಸನಶಾಸ್ತ್ರಜ್ಞ ಕೆ.ವಿ.ರಮೇಶ್ ಅವರು ಅಹಲಬಾದ್ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಪ್ರಸ್ತುತಪಡಿಸಿ, ಅದನ್ನು ಓದಿ ಹೇಳಿದ್ದರು. ಬಳಿಕ ಇದನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಯಿತು. ಇದರ ಪರಿಣಾಮವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೆರವಾಯಿತು ಎಂದರು.

ಕಾವೇರಿ ಜಲ ವಿವಾದದ ಕುರಿತು ವಿಚಾರಣೆ ನಡೆಸಿದ ಕಾವೇರಿ ನ್ಯಾಯಾಧೀಕರಣದಲ್ಲೂ ಸಾರ್ವಜನಿಕ ದಾಖಲೆ ಪ್ರಯೋಜನಕ್ಕೆ ಬಂದಿದೆ. 1905ರ ಕಾವೇರಿ ನದಿ ನೀರಿನ ಮಟ್ಟದ ಕುರಿತು ದಾಖಲೆಯನ್ನು ಮಂಡಿಸಲಾಯಿತು. ಇದು ಕರ್ನಾಟಕದ ಪರ ತೀರ್ಪು ಬರಲು ಅನುಕೂಲವಾಯಿತು ಎಂದರು.

ಸರ್ಕಾರಿ ದಾಖಲೆ ರಕ್ಷಣೆ ಕುರಿತು ಸಾರ್ವಜನಿಕ ದಾಖಲೆಗಳ ಅಧಿನಿಯಮ-2010 ಮತ್ತು ನಿಯಮ-2013 ಜಾರಿಗೆ ತರಲಾಗಿದೆ. ಈ ವಿಷಯದಲ್ಲಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಜೈಲು ಶಿಕ್ಷೆ, ದಂಡ ವಿಧಿಸಲು ಅಧಿಕಾರವಿದೆ ಎಂದರು.

ಸರ್ಕಾರಿ ದಾಖಲೆಗಳನ್ನು ನಾಲ್ಕು ವಿಧದಲ್ಲಿ ವಿಂಗಡನೆ ಮಾಡಲಾಗುತ್ತದೆ. ಎ-ಶಾಶ್ವತ ಕಡತ, ಬಿ-30 ವರ್ಷ ರಕ್ಷಿಸುವ ಕಡತ, ಸಿ-10 ವರ್ಷ ರಕ್ಷಿಸುವ ಕಡತ, ಡಿ-1 ವರ್ಷ ಮಾತ್ರ ಕಾಯ್ದಿಡುವ ಕಡತ ಎಂಬ ವರ್ಗೀಕರಣ ಆಧಾರದ ಮೇಲೆ ಸರ್ಕಾರಿ ಕಡತ, ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ನಿಯಮಗಳ ಪ್ರಕಾರವೇ ಅವುಗಳ ವಿಲೇವಾರಿ, ನಾಶಪಡಿಸಬೇಕು ಎಂದರು.

ಸರ್ಕಾರಿ ಕಡತಗಳು ಹಾಳಾಗುವುದು ತಡೆಯಲು ಬೇವಿನ ಕಡ್ಡಿ, ಸೊಪ್ಪು ಬಹಳ ಪರಿಣಾಮಕಾರಿಯಾಗಿದೆ. ಇದು ಸುಲಭವಾಗಿ ಕೈಗೆಟುಕುವ ವಸ್ತುವಾಗಿದೆ. ಇದಕ್ಕೆ ಅನುದಾನವೂ ಬೇಕಾಗಲ್ಲ. ರಾಸಾಯನಿಕ ವಸ್ತುಗಳ ಬಳಕೆಯನ್ನೂ ತಪ್ಪಿಸಲಿದೆ ಎಂದರು. ಇಲಾಖೆಯ ನಿರ್ದೇಶಕ ಡಾ.ಗವಿಸಿದ್ದಯ್ಯ, ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ ಇದ್ದರು.