ಹಾಸನ: ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನದ ಮೊದಲ ದಿನವಾದ ಶುಭ ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮುಂಜಾನೆ 4 ಗಂಟೆಯಿಂದಲೇ ದೇವಾಲಯದತ್ತ ಹರಿದು ಬಂದ ಭಕ್ತ ಜನ, ತಂಡೋಪ ತಂಡವಾಗಿ ಬಂದು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ಇನ್ನೂ ಕೆಲವರು ಮಧ್ಯರಾತ್ರಿಯೇ ಆಗಮಿಸಿದ್ದರು.
ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಯಾವುದೇ ನೂಕು-ನುಗ್ಗಲು ಅಥವಾ ಗದ್ದಲ, ಗೊಂದಲ ಇಲ್ಲದೆ ಭಕ್ತರು ಶಾಂತ ರೀತಿಯಲ್ಲಿ ದೇವಿಯನ್ನು ಎದುರುಗೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗುರುವಾರ ದೇವಿಯ ಗರ್ಭಗುಡಿ ಬಾಗಿಲು ತೆರೆದ ನಂತರ ಕಳೆದ ರಾತ್ರಿ ಗರ್ಭಗುಡಿ ಸ್ವಚ್ಛಗೊಳಿಸಿ, ಮಹಾ ಮಂಗಳಾರತಿ ನಂತರ ಆಭರಣ ಧಾರಣೆ ಮಾಡಲಾಗಿತ್ತು. ಹೀಗಾಗಿ ವಿಶೇಷ ರೀತಿಯಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದಳು.
ದಿನದಲ್ಲಿ ಎರಡು ಬಾರಿ ನೈವೇದ್ಯಕ್ಕೆ ಅವಕಾಶ ಬಿಟ್ಟರೆ ಉಳಿದ ಅವಧಿ ಯಲ್ಲಿ ದೇವಿಯ ದರ್ಶನ ಪಡೆಯ ಬಹುದಾಗಿದೆ. ಕ್ಯೂನಲ್ಲಿ ನಿಂತಿದ್ದ ಭಕ್ತರಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳಿಂದ ಕುಡಿಯುವ ನೀರು, ಮಜ್ಜಿಗೆ ಸೇರಿ ವಿತರಿಸಲಾಯಿತು. ಅದೃಷ್ಟವಶಾತ್ ಬೆಳಗ್ಗೆಯಿಂದ ಸಂಜೆವರೆಗೆ ಮಳೆರಾಯ ಬಿಡುವು ನೀಡಿದ್ದರಿಂದ ಭಕ್ತರು ನಿರುಮ್ಮಳವಾಗಿ ಹಾಸನಾಂಬೆ ದರ್ಶನ ಪಡೆದರು.
ಇನ್ನೂ ದೇವಿಯ ವಿಶೇಷ ದರ್ಶನಕ್ಕೆ ತೆರೆಯಲಾಗಿರುವ ಟಿಕೆಟ್ ಕೌಂಟರ್‌ನಲ್ಲಿ ಮೊದಲನೇ ದಿನ ಒಂದು ಸಾವಿರ ರೂ. ಟಿಕೆಟ್ ಖರೀದಿಗೆ ಜನ ಅಷ್ಟಾಗಿ ಕಂಡು ಬರಲಿಲ್ಲ. ಆದರೆ 300 ರೂ. ಟಿಕೆಟ್ ದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ಸಾಧಾರಣವಾಗಿತ್ತು. ಶನಿವಾರ ಮತ್ತು ಭಾನುವಾರ ವೀಕೆಂಡ್ ಆಗಿರುವುದರಿಂದ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ.
ಗಣ್ಯಾತಿಗಣ್ಯರ ಆಗಮನ:
ಮತ್ತೊಂದೆಡೆ ಮೊದಲ ದಿನವೇ ಶಕ್ತಿ ದೇವತೆ ದರ್ಶನಕ್ಕೆ ಗಣ್ಯಾತಿ ಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮೈಸೂರಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಬೆಳಗ್ಗೆಯೇ ಆಗಮಿಸಿ ಹಾಸನಾಂಬೆ ದರ್ಶನ ಪಡೆದರು. ಸರ್ಕಾರಿ ಶಿಷ್ಟಾಚಾರದ ಪ್ರಕಾರ, ರಾಜಮಾತೆಯನ್ನ ಜಿಲ್ಲಾಧಿಕಾರಿ ಸಿ.ಸತ್ಯಭಾಂಮಾ ಹಾಗೂ ಇತರೆ ಅಧಿಕಾರಿಗಳು ಸ್ವಾಗತಿಸಿದರು. ಇದೇ ವೇಳೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಸಹ ದತ್ತು ಪುತ್ರ ಬಳ್ಳೂರು ಉಮೇಶ್ ಜೊತೆ ಆಗಮಿಸಿ ದೇವಿಯ ದರ್ಶನ ಪಡೆದರು.
ಇವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಡಾ.ಸೂರಜ್ ರೇವಣ್ಣ, ಮಧು ಮಾದೇಗೌಡ, ಬ್ರಹ್ಮಾಂಡ ಗುರೂಜಿ
ಮೊದಲಾದವರು ಅಮ್ಮನ ದರ್ಶನ ಪಡೆದರು.
ಅತೀವ ಸಂತೋಷ ಆಗಿದೆ:
ದೇವಿ ದರ್ಶನ ಪಡೆದ ನಂತರ ಮಾತನಾಡಿದ ಪ್ರಮೋದಾದೇವಿ, ಜಗನ್ಮಾತೆ ಹಾಸನಾಂಬೆ ತಾಯಿ ದರ್ಶನ ಪಡೆದಿದ್ದೇವೆ. ಈ ದಿನ ಬಂದಿರುವುದು ಸಂತಸ ತಂದಿದೆ. ಎರಡು-ಮೂರು ವರ್ಷದ ಹಿಂದೆಯೇ ದೇವಿ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದೆ, ಆದರೆ ಆಗಿರಲಿಲ್ಲ. ಇಂದು ತಾಯಿ ಕರೆಸಿಕೊಂಡಿದ್ದಾಳೆ. ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನ ಪಡೆದು ತುಂಬಾ ಸಂತೋಷ ಆಗುತ್ತಿದೆ.
ಇಡೀ ರಾಜ್ಯದ ಜನರಿಗೆ ಒಳ್ಳೆಯದಾಗಲಿ, ಎಲ್ಲಾ ತೊಂದರೆ ನಿವಾರಣೆ ಆಗಲಿ. ಯಾರಿಗೂ ತೊಂದರೆ ಆಗುವುದು ಬೇಡ. ನದಿ ಸಮೃದ್ಧಿಗೆ ಎಷ್ಟು ಬೇಕು, ಅಷ್ಟು ಮಳೆ ಆಗಲಿ. ಅತಿವೃಷ್ಟಿ ಆಗುವುದು ಬೇಡ. ಎಲ್ಲಾ ಜನತೆ ಸುಖ, ಸಂತೋಷವಾಗಿರಲಿ. ನಮ್ಮ ಕುಟುಂಬ ಹಾಗೂ ನಮ್ಮ ಜೊತೆ ಇರುವವರೆಗೂ ಒಳ್ಳೆಯದು ಮಾಡು ತಾಯೆ ಎಂದು ಬೇಡಿಕೊಂಡಿದ್ದೇನೆ ಎಂದರು.
ಮೂರನೇ ಮಹಾಯುದ್ಧ:
ಬ್ರಹ್ಮಾಂಡ ಗುರೂಜಿ ಮಾತನಾಡಿ, 2025-2026 ಕ್ಕೆ ಮೂರನೇ ಮಹಾಯುದ್ಧ ಶುರುವಾಗಲಿದೆ. 3ನೇ ಮಹಾಯುದ್ಧ ನಡೆಯೋದು ಶತಸಿದ್ಧ. 13 ಮುಸ್ಲಿಂ ರಾಷ್ಟ್ರಗಳೆಲ್ಲಾ ಭಾರತ ದೇಶದ ಮೇಲೆ ದಾಳಿ ಮಾಡ್ತಾರೆ ಎಂದು ಭವಿಷ್ಯ ನುಡಿದರು.
ಪ್ರಧಾನಮಂತ್ರಿಗಳು 2 ವರ್ಷದ ಅವಧಿಯಲ್ಲಿ ಒಂದೂವರೆ ವರ್ಷ ಮಾತ್ರ ಪ್ರಧಾನ ಮಂತ್ರಿಯಾಗಿ ಉಳೀತಾರೆ. ಅವರು ರಾಜೀನಾಮೆ ಕೊಟ್ಟು ಆಶ್ರಮ ಸೇರ್ತಾರೆ. ರಾಜಕೀಯ ಹೊಲಸು ಎಂದು ಶುದ್ಧ, ತಿದ್ದುಪಡಿ ಮಾಡಲು ಬಹಳ ಪ್ರಯತ್ನ ಮಾಡಿದರು. ಅದು ಆಗದ ಕಾರಣ, ಒಬ್ಬ ಸನ್ಯಾಸಿ ಜಗತ್ತನ್ನು ಆಳುತ್ತಾರೆ ಎಂದು ಹೇಳಿದರು.
ಪ್ರಧಾನ ಮಂತ್ರಿಗಳೇ ಇಳಿಯಬಹುದು. ಇಲ್ಲ ಬೇರೆ ಆಯ್ಕೆ ನಡೆಯಬಹುದು. ಭಾರತ ದೇಶ 2 ಭಾಗ ಆಗುತ್ತೆ, ಪೂರಿ ಜಗನ್ನಾಥ ಮುಳುಗುವ ಕ್ಷೇತ್ರವಾಗುತ್ತೆ. 60, 70 ಅಡಿ ನೀರು ಬರುತ್ತೆ. 3 ಗ್ರಹಣಗಳ ಒಂದು ವರ್ಷದಲ್ಲಿ ಬರಬಾರದು. ಮುಂದಿನ ವರ್ಷ 3 ಗ್ರಹಣ ಏಕ ಕಾಲಕ್ಕೆ ಬರುತ್ತೆ. ಬಾಂಗ್ಲಾದೇಶ-ಚೈನಾ ಕುತಂತ್ರ ಮಾಡಿ ಭಾರತದ ಮೇಲೆ ದಾಳಿ ಮಾಡುತ್ತವೆ. ಶಿವನ ಆಣೆಗೂ ಕರ್ನಾಟಕ ಸಹ ಮೂರು ಭಾಗ ಆಗಲಿದೆ. ಮೂವರು ಮುಖ್ಯಮಂತ್ರಿಗಳಾಗುತ್ತಾರೆ. ನೀರಿನ ಅಭಾವ ಉಂಟಾಗುತ್ತದೆ, ರೋಗ ರುಜಿನ ಹೆಜ್ಜಾಗಲಿವೆ ಎಂಬ ಕಳವಳಕಾರಿ ಸಂಗತಿ ತೆರೆದಿಟ್ಟರು.