ಹಾಸನ: ರಾಜ್ಯದಲ್ಲಿ ಸಾರಿಗೆ ನೌಕರರ ಆತ್ಮಹತ್ಯೆ ಹೆಚ್ಚಾಗುತ್ತಿದ್ದು, ಸಾರಿಗೆ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ. ಶಿವಕುಮಾರ್ ಆಗ್ರಹಿಸಿದರು.
ಕಳೆದ ಒಂದು ವಾರದಿಂದ ಸಾರಿಗೆ ಸಂಸ್ಥೆಯ ನಾಲ್ಕಕ್ಕೂ ಹೆಚ್ಚು ನೌಕರರು ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾರಿಗೆ ನೌಕರರ ಸ್ಥಿತಿ ಹೇಳತೀರಲಾಗಿದೆ. ಸಾರಿಗೆ ನೌಕರರು ತಮ್ಮ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಹೋರಾಟ ಮಾಡಿದರೂ ಸರ್ಕಾರ ನಿರ್ಲಕ್ಷೃ ಧೋರಣೆ ತಾಳಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿ, ಹೋರಾಟದಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದರು. ಪಕ್ಷದ ಮುಖಂಡರಾದ ಶ್ರೀನಿವಾಸ್, ಪ್ರೇಮ್‌ಕುಮಾರ್, ವಿಜಯ್ ಸಾರಥಿ, ಚಂದ್ರಶೇಖರ್ ಇತರರು ಇದ್ದರು.