oplus_3146752 
ಜಿಲ್ಲೆ

ಸಾರಿಗೆ ಸಂಸ್ಥೆ ಮಳಿಗೆಗಳಿಗಿಲ್ಲ ಬಾಡಿಗೆ ಯೋಗ

ಸಿಂಧನೂರು: ಸಾರಿಗೆ ಸಂಸ್ಥೆ ಆದಾಯದ ಉದ್ದೇಶದಿಂದ ನಗರದ ಬಸ್ ಡಿಪೋ ಹತ್ತಿರ ಬಸವ ವೃತ್ತಕ್ಕೆ ಹೊಂದಿಕೊಂಡಂತೆ ನಿರ್ಮಾಣ ಮಾಡಿರುವ ಮಳಿಗೆಗಳು ಹಾಳು ಬಿದ್ದಿದ್ದು, ಸುತ್ತಲೂ ಅನೈರ್ಮಲ್ಯದಿಂದಾಗಿ ದುರ್ನಾತ ಬೀರುತ್ತಿವೆ.

ಈಗಿನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಹಿನ್ನೆಲೆಯಲ್ಲಿ ಕಳೆದ 15 ವರ್ಷಗಳ ಹಿಂದೆ ಸದರಿ ಜಾಗದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ ಮಾಡಿ, ಆರೇಳು ವರ್ಷ ಬಳಕೆ ಮಾಡಲಾಗಿತ್ತು. ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ನಂತರ ಹಳೆಯ ಬಸ್ ನಿಲ್ದಾಣ ಜಾಗ ಪಾಳು ಬಿದ್ದಿತ್ತು. ಅಕ್ಕಪಕ್ಕದ ಜನರು ತ್ಯಾಜ್ಯವನ್ನೆಲ್ಲ ಇಲ್ಲಿಯೇ ಸುರಿಯುತ್ತಿದ್ದರು. ಇದರಿಂದಾಗಿ ಜಾಗ ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು.

ಆ ಬಳಿಕ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸುಮಾರು ಮೂರು ಕೋಟಿ ರೂ. ಅನುದಾನ ಮೀಸಲಿಟ್ಟು ಮಳಿಗೆಗಳನ್ನು ನಿರ್ಮಾಣ ಮಾಡಿತ್ತು. ಮುಂಭಾಗದ ಕೆಲ ಮಳಿಗೆಗಳನ್ನು ಮಾತ್ರ ಜನರು ಬಾಡಿಗೆಗೆ ಪಡೆದಿದ್ದಯ, ಸಂಕೀರ್ಣದ ಎಡ ಮತ್ತು ಬಲ ಭಾಗದಲ್ಲಿ ಯಾರು ಮಳಿಗೆಗಳನ್ನು ಬಾಡಿಗೆ ಪಡೆಯುತ್ತಿಲ್ಲ. ಇದರಿಂದಾಗಿ ಆದಾಯದ ನಿರೀಕ್ಷೆಯಲ್ಲಿದ್ದ ಸಾರಿಗೆ ಸಂಸ್ಥೆಗೆ ಯಾವುದೇ ರೀಯಿಯಲ್ಲಿ ಲಾಭವಾಗಿಲ್ಲ. ಸಾರಿಗೆ ಸಂಸ್ಥೆ ನಿಗದಿ ಮಾಡಿರುವ ಬಾಡಿಗೆ ಮೊತ್ತ ಕೇಳಿ ಯಾರೂ ಇಲ್ಲಿ ಬಾಡಿಗೆಗೆ ಬರುತ್ತಿಲ್ಲ. ನಗರದ ಪ್ರಮುಖ ಭಾಗದಲ್ಲಿ ಕಟ್ಟಡ ಇದ್ದರೂ, ಮಳಿಗೆ ಬಾಡಿಗೆಗೆ ಯಾರೂ ಮುಂದಾಗುತ್ತಿಲ್ಲ.