ಹಾವೇರಿ: ಸಾರಿಗೆ ಸಂಸ್ಥೆ ನಿವೃತ್ತ ಚಾಲಕ ನಗರದ ಹೊರವಲಯದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಸಮೀಪದ ಸಣ್ಣ ಹೋಟೆಲ್ವೊಂದರಲ್ಲಿ ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ನಿವಾಸಿ ಶಿವಾನಂದಪ್ಪ ಹೂಗಾರ (62) ಆತ್ಮಹತ್ಯೆ ಮಾಡಿಕೊಂಡವರು. ಹಾವೇರಿ ಸಾರಿಗೆ ಘಟಕದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ಒಂದು ವರ್ಷ ಮೂರು ತಿಂಗಳ ಹಿಂದೆ ನಿವೃತ್ತರಾಗಿದ್ದರು. ಪೂರ್ಣ ಪ್ರಮಾಣದಲ್ಲಿ ಪಿಂಚಣಿ ಹಣ ಸಿಕ್ಕಿರಲಿಲ್ಲ. ಪಿಂಚಣಿ ಹಣ ಪಡೆಯುವ ಕುರಿತು ಸೆ. 1ರಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಬಂದಿದ್ದು, ಈ ವೇಳೆ ಅಧಿಕಾರಿಗಳು ಸ್ಪಂದಿಸದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ, ‘ಸಂಸ್ಥೆಯಿಂದ ಅವರಿಗೆ ಕೊಡಬೇಕಿರುವ ಅಂತಿಮ ಕ್ಲೇಮ್ ಹೊರತುಪಡಿಸಿ ಬಾಕಿ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಈಗಾಗಲೇ ಪಿಂಚಣಿ ಬರುತ್ತಿದೆ. ಪಿಎಫ್, ಅರಿಯರ್ಸ್ ಇತರ ಸೌಲಭ್ಯ ಅವರಿಗೆ ಸಿಕ್ಕಿದೆ. ಫೈನಲ್ ಕ್ಲೇಮ್ ಗ್ರಾಚ್ಯುಯಿಟಿ ಮತ್ತು ಸರಂಡರ್ ಮೊತ್ತ ಕೇಂದ್ರ ಕಚೇರಿಯಿಂದ ಬರಲಿದೆ. ಇವರು ನಿವೃತ್ತರಾಗಿ 1 ವರ್ಷ 3 ತಿಂಗಳಾಗಿದೆ. ಸಂಸ್ಥೆಯಲ್ಲಿ ಸದ್ಯ 1 ವರ್ಷ 8 ತಿಂಗಳ ಅವಧಿ ಆದವರಿಗೆ ಸೌಲಭ್ಯ ಬಂದಿದೆ. ಇವರಿಗೂ ನಾಲ್ಕೈದು ತಿಂಗಳಲ್ಲಿ ಫೈನಲ್ ಕ್ಲೇಮ್ ಸಿಗುತ್ತಿತ್ತು. ಪಿಂಚಣಿ ಹಣಕ್ಕಾಗಿ ಅವರು ನನ್ನನ್ನು ಭೇಟಿಯಾಗಿಲ್ಲ’ ಎಂದರು.