ಚಾಮರಾಜನಗರ: ರಾಜ್ಯಾದ್ಯಂತ ಸೋಮವಾರ ಕರೆ ಕೊಟ್ಟಿದ್ದ ಸಾರಿಗೆ ಬಸ್ ನೌಕರರ ಮುಷ್ಕರ ಬಿಸಿ ಚಾಮರಾಜನಗರಕ್ಕೂ ತಟ್ಟಿತು. ವಿವಿದ ತಾಲೂಕುಗಳಲ್ಲಿ ಬಸ್‌ಗಳು ಸಿಗದೆ ಪ್ರಯಾಣಿಕರು ಪರದಾಡಿದರು.
ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಯಳಂದೂರು, ಕೊಳ್ಳೇಗಾಲ ತಾಲೂಕುಗಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಮುಂಜಾನೆಯೇ ಪ್ರಯಾಣಿಕರ ಕಾಯುವಿಕೆ ಕಂಡುಬಂದಿತು. ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಗಳಿಗೆ ತೆರಳುವ ಸಾರ್ವಜನಿಕರು ಬಸ್‌ಗಳಿಗಾಗಿ ಕಾಯುತ್ತ ಕುಳಿತಿದ್ದ ದೃಶ್ಯ ಕಂಡುಬಂದಿತು. ಚಾಮರಾಜನಗರದ ಮಧ್ಯಾಹ್ನದ ವೇಳೆಗೆ ಬೆರಳೆಣಿಕೆಯಷ್ಟು ಬಸ್‌ಗಳ ಸಂಚಾರ ಶುರುವಾಯಿತು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಇನ್ನು ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ಬಸ್‌ಗಳ ಮೊರೆ ಹೋದರು. ಖಾಸಗಿ ಬಸ್‌ಗಳಲ್ಲಿ ಕಿಕ್ಕಿರಿದು ಜನರು ತುಂಬಿಕೊಂಡಿದ್ದರು. ಆಟೋ, ಟೆಂಪೋಗಳೂ ಸಹ ಪ್ರಯಾಣಿಕರನ್ನು ಕರೆದುಕೊಂಡು ಹೋದವು.
ನಗರದಲ್ಲಿ ಬಸವಳಿದ ಪ್ರಯಾಣಿಕರು: ಜಿಲ್ಲಾ ಕೇಂದ್ರ ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಕಾದ ಪ್ರಯಾಣಿಕರು ಬಸವಳಿದರು. ಬೆಳಗ್ಗೆ ನಿಂತಿದ್ದ ಬಸ್ ಹೊರಡುತ್ತದೆ ಎಂದು ಪ್ರಯಾಣಿಕರೆಲ್ಲರೂ ಸೀಟು ಹಿಡಿದುಕುಳಿತಿದ್ದರು. ಕಾದು ಕಾದು ಕೊನೆಗೆ ಬಸ್ ಸಂಚಾರವಿಲ್ಲದವೆಂದು ತಿಳಿದು ಕೆಳಗಿಳಿದರು. ಬಳಿಕ ಯಾವುದಾದರೊಂದು ಬಸ್ ಸೇವೆ ಆರಂಭಿಸಬಹುದೆಂದು ಕಾದರು. ಕೊನೆಗೆ ಸಾರಿಗೆ ಸೌಲಭ್ಯಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಪರದಾಡಬೇಕಾಯಿತು. ಇನ್ನು ಚಾಮರಾಜನಗರಕ್ಕೆ ಮೈಸೂರಿನಿಂದ ಕೆಲಸಕ್ಕೆ ಬರುವವರು ಮತ್ತು ಮೈಸೂರಿನಿಂದ ಚಾಮರಾಜನಗರಕ್ಕೆ ಕೆಲಸಕ್ಕೆ ಹೋಗುವವರು ರೈಲುಗಳಲ್ಲಿ ಸಂಚಾರ ಮಾಡಿದರು. ಈ ಹಿನ್ನೆಲೆಯಲ್ಲಿ ಸೋಮವಾರ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಮಧ್ಯಾಹ್ನದ ವೇಳೆಗೆ ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮೈಸೂರಿಗೆ ಹೋಗುವ ಬಸ್ ಸೇವೆ ಆರಂಭಿಸಿತು. ಸಂಜೆ ವೇಳೆಗೆ ಬೆರಳೆಣಿಕೆಷ್ಟು ಬಸ್‌ಗಳು ಮಾತ್ರ ರಸ್ತೆಗಿಳಿದವು.