ಕೊಳ್ಳೇಗಾಲ ಬಸ್ಸ್ ನಿಲ್ದಾಣದಲ್ಲಿ ಮಹಿಳೆಯರು ಸಾರಿಗೆ ಬಸ್‌ಗೆ ಕಾದು ಕುಳಿತಿರುವುದು. 
ಜಿಲ್ಲೆ

ಸಾರಿಗೆ ಬಸ್‌ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ಶಕ್ತಿ ಯೋಜನೆ ಜಾರಿ ಬೆನ್ನಲ್ಲೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ಅವಲಂಬಿಸುತ್ತಿರುವುದು ಕಂಡುಬಂದಿದೆ.

ಬೆಂಗಳೂರು, ಮೈಸೂರು, ಚಾಮರಾಜನಗರ, ಮಲೆ ಮಹದೇಶ್ವರ ಬೆಟ್ಟ, ಒಡೆಯರಪಾಳ್ಯ, ಗೌಡಳ್ಳಿ, ಚಿಕ್ಕಲ್ಲೂರು ಇತರೆಡೆಗೆ ಜನರು ಸಾರಿಗೆ ಹಾಗೂ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದರು. ಶಕ್ತಿ ಯೋಜನೆ ಜಾರಿಯಾಗುವ ಮುನ್ನ ಹೆಣ್ಣು ಮಕ್ಕಳು, ಮಹಿಳೆಯರು ತಮ್ಮ ಊರುಗಳಿಗೆ ಸಕಾಲಕ್ಕೆ ಬರುವ ಬಸ್ ಹತ್ತಿ ಪ್ರಯಾಣಿಸುತ್ತಿದ್ದರು. ಆದರೆ, ಉಚಿತ ಬಸ್ ಪ್ರಯಾಣ ಘೋಷಣೆಯಾದ ಬಳಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಕೆಎಸ್‌ಆರ್‌ಟಿಸಿ ಬಸ್ ಬರುವವರೆಗೂ ಕಾದು ನಿಲ್ಲುತ್ತಿದ್ದಾರೆ. ಇದರಿಂದಾಗಿ ಖಾಸಗಿ ಬಸ್‌ಗಳಲ್ಲಿ ತೆರಳುವ ಮಹಿಳೆಯರ ಸಂಖ್ಯೆ ತಗ್ಗಿದೆ.

ಬೆಂಗಳೂರು, ಮೈಸೂರು, ಚಾಮರಾಜನಗರ, ಮಲೆ ಮಹದೇಶ್ವರ ಬೆಟ್ಟ ಮಾರ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳು ಹೆಚ್ಚು ತೆರಳುತ್ತದೆ. ಆದರೆ, ಒಡೆಯರಪಾಳ್ಯ, ಗೌಡಳ್ಳಿ ಕಡೆಗೆ ಸಾರಿಗೆ ಬಸ್ ಸೌಲಭ್ಯ ಕಡಿಮೆ ಇರುವುದರಿಂದ ಮಹಿಳೆಯರು ಖಾಸಗಿ ಬಸ್‌ಗಳನ್ನೇ ಎಂದಿನಂತೆ ಆಶ್ರಯಿಸುತ್ತಿದ್ದಾರೆ.