ರಾಮನಗರ : ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಳ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ರಾಮನಗರದಿಂದ ಚನ್ನಪಟ್ಟಣ ಕಡೆ ತೆರಳುತ್ತಿದ್ದ ಸಾರಿಗೆ ಬಸ್ ಏರಿ ಬಸ್ ಸೀಟಿನಲ್ಲಿ ಕುಳಿತು, ಬಸ್ ಮುಂಭಾಗ ಹಿರಿಯರಿಗೆ ಸನ್ಮಾನಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.
ರಾಜ್ಯ ಸರ್ಕಾರ ಈಗಾಗಲೇ ಮಹಿಳೆಯರಿಗೆ ಉಚಿತವಾಗಿ ಹಣ ನೀಡುತ್ತಿರುವಂತಹ ಗೃಹಲಕ್ಷ್ಮೀ ಯೋಜನೆಯ ರೀತಿಯಲ್ಲಿಯೇ ಪುರುಷರಿಗೂ ಹಣ ನೀಡಬೇಕು. ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಏರಿಸಿರುವ ಬಸ್ ಪ್ರಯಾಣ ದರ ಕಡಿಮೆ ಮಾಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ವಾಟಾಳ್ ನಾಗರಾಜ್ ಮಾತನಾಡಿ,ಪತಿ-ಪತ್ನಿ, ಅಣ್ಣ-ತಂಗಿ, ತಾಯಿ-ತಂದೆಯನ್ನು ಬೇರೆ ಮಾಡಿರುವುದು ಶಾಸ್ತ್ರದ ಪ್ರಕಾರ ಪಾಪದ ಕೆಲಸ ಅನ್ನುತ್ತಾರೆ. ಇದು ಪುರುಷರಿಗೆ ಮಾಡುತ್ತಿರುವ ಅಪಮಾನ. ಇದನ್ನು ಮಹಿಳೆಯರೂ ಒಪ್ಪುವುದಿಲ್ಲ. ಕುಟುಂಬದಲ್ಲಿನ ತಂದೆ , ಅಣ್ಣ, ತಮ್ಮನಿಗೆ ಸೌಲಭ್ಯ ಕೊಡದಿರುವುದು ಅವರಿಗೂ ನೋವು ತಂದಿದೆ. ಪುರುಷರಿಗೂ ಉಚಿತ ಬಸ್ ಪ್ರಯಾಣ ಮಾಡಬೇಕು ಎಂದು ಒತ್ತಾಯಿಸಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರಿಗೆ ಹಣ ನೀಡುತ್ತೀರಿ. ಪುರುಷರಿಗೆ ನೀಡದಿರುವುದು ಅಪಾಯಕಾರಿ ಬೆಳವಣಿಗೆ. ಮುಂದಿನ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಈ ತಾರತಮ್ಯ ಸರಿದೂಗಿಸಬೇಕು. ಇಲ್ಲದಿದ್ದರೆ ವಾಟಾಳ್ ಪಕ್ಷ ಪುರುಷರನ್ನು ಸಂಘಟಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರುನಾಡ ಸೇವೆ ರಾಜ್ಯ ಉಪಾಧ್ಯಕ್ಷ ಐಜೂರು ಎಂ. ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಜಿಲ್ಲಾ ದಲಿತ ಘಟಕ ಅಧ್ಯಕ್ಷ ಕೆ. ಜಯರಾಮು, ತಾಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ತಾಲೂಕು ಮಹಿಳಾ ಅಧ್ಯಕ್ಷೆ ಭಾಗ್ಯ ಸುಧಾ, ನಗರ ಘಟಕ ಅಧ್ಯಕ್ಷ ಪ್ರಸನ್ನ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಬಿಡದಿ ಘಟಕ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಕೆಂಪರಾಜು, ರಾಜು, ಶ್ರೀನಿವಾಸ್ , ಆನಂದ್, ಶಿವರಾಜು, ವಾಟಾಳ್ ಪಕ್ಷದ ಪಾರ್ಥ ಸಾರಥಿ, ನಾರಾಯಣಸ್ವಾಮಿ, ಮಹದೇವ್ ಮತ್ತಿತರರು ಹಾಜರಿದ್ದರು.
ತಾರತಮ್ಯ ಮಾಡಬೇಡಿ : ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಳ ಅವೈಜ್ಞಾನಿಕವಾಗಿದೆ. ರಾಜ್ಯಸರ್ಕಾರ ಒಂದು ಕಡೆ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ, ಪುರುಷರಿಂದ ಹಣ ಕೀಳುತ್ತಿದೆ. ಇದು ದೊಡ್ಡ ತಾರತಮ್ಯವಾಗಿದೆ. ಇತಿಹಾಸದಲ್ಲಿಯೇ ಪುರುಷ ಮತ್ತು ಮಹಿಳೆಯರು ಬೇರೆ ಬೇರೆ ಎಂದು ತಾರತಮ್ಯ ಮಾಡಿಲ್ಲ. ಮಹಿಳೆಯರ ಬಗ್ಗೆ ನಮಗೆ ಗೌರವ ಇದೆ. ಅವರಿಗೆ ಗೃಹಲಕ್ಷ್ಮೀ, ಶಕ್ತಿ ಯೋಜನೆ ನೀಡಿದ್ದು ಸಂತೋಷ. ಆದರೆ, ಪುರುಷರನ್ನು ಏಕೆ ಕಡೆಗಣಿಸಲಾಗುತ್ತಿದೆ. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಚಿಂತನೆಯೋ ಅಥವಾ ಬೇರೆಯವರು ಸಲಹೆ ನೀಡಿದ್ದಾರೊ ಸ್ಪಷ್ಟ ಪಡಿಸಲಿ ಎಂದು ವಾಟಾಳ್ ನಾಗರಾಜ್ ಹೇಳಿದರು..