ಪಾಂಡವಪುರ ತಾಲೂಕು ಜಕ್ಕನಹಳ್ಳಿ ವೃತ್ತದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳನ್ನು ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಚಾಲಕ ಸಾವು

ಪಾಂಡವಪುರ: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾನೆ. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಸಾರಿಗೆ ಸಂಸ್ಥೆ ಬಸ್‌ಗಳನ್ನು ಕೆಲಕಾಲ ತಡೆದು ಪ್ರತಿಭಟನೆ ನಡೆಸಿದರು.

ತಾಲೂಕಿನ ಕದಲಗೆರೆ ಗ್ರಾಮದ ಭರತ್ (29) ಮೃತ. ಅದೇ ಗ್ರಾಮದ ನಾಗರಾಜು(30) ಗಂಭೀರವಾಗಿ ಗಾಯಗೊಂಡಿರುವ ಯುವಕ. ಸೋಮವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಜಕ್ಕನಹಳ್ಳಿ ಸಂತೆಯಲ್ಲಿ ಸೊಪ್ಪು, ತರಕಾರಿ ಖರೀದಿಸಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಮೈಸೂರಿನಿಂದ ನಾಗಮಂಗಲ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಬೈಕ್ ಸಮೇತ ಇಬ್ಬರನ್ನು ಎಳೆದುಕೊಂಡು ಹೋಗಿದೆ. ತೀವ್ರವಾಗಿ ಗಾಯಗೊಂಡ ಭರತ್ ಸ್ಥಳದಲ್ಲೇ ಮೃತಪಟ್ಟರೆ ಹಿಂಬದಿ ಸವಾರ ನಾಗರಾಜು ಗಂಭೀರ ಗಾಯಗೊಂಡಿದ್ದಾನೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಶವವನ್ನು ಹೆದ್ದಾರಿಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಜಕ್ಕನಹಳ್ಳಿ ವೃತ್ತದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದೆ. ವೃತ್ತದ ಮಧ್ಯ ಭಾಗದಲ್ಲಿ ದೇವಸ್ಥಾನವಿರುವುದರಿಂದ ವಾಹನ ಚಾಲಕರಿಗೆ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಕಾಣಿಸುವುದಿಲ್ಲ. ಇದರಿಂದ ಅಪಘಾತ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನಾಕಾರರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಂಗಪಟ್ಟಣ ಮತ್ತು ಬೀದರ್ ಹೆದ್ದಾರಿಯಾಗಿರವ ಕಾರಣ ವಾಹನಗಳ ಸಂಚಾರ ಅಧಿಕವಾಗಿದೆ. ಟ್ರಾಫಿಕ್ ಸಿಗ್ನಲ್, ರಸ್ತೆ ಉಬ್ಬು ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗಿದೆ. ರಾಜಕೀಯ ಮೇಲಾಟಕ್ಕಾಗಿ ಸ್ಥಾಪನೆಯಾಗಿರುವ ದೇವಸ್ಥಾನದಿಂದ ಅಪಘಾತಗಳು ಸಂಭವಿಸುತ್ತಿವೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಗಮಿಸುವವರೆಗೆ ಸ್ಥಳದಿಂದ ತೆರಳುವುದಿಲ್ಲ ಪಟ್ಟು ಹಿಡಿದರು.

ಪ್ರತಿಭಟನಾಕಾರರ ಮನವೊಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಸೂಕ್ತ ಪರಿಹಾರ ಕೊಡಿಸುವ ಭರವಸೆ ಕೊಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ ನಂತರ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು. ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ನೀಡಲಾಯಿತು. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‌ಎನ್‌ಟಿ ಸೋಮಶೇಖರ್, ಕಾಡೇನಹಳ್ಳಿ ಅನಿಲ್, ಕಾರ್ತಿಕ್, ಕದಲಗೆರೆ ಮಹೇಶ್, ರಾಮು, ಯೋಗರಾಜು, ಅರಕನಕೆರೆ ಪುರೊಷೋತ್ತಮ್ ಇತರರು ಇದ್ದರು.