ಜಿಲ್ಲೆ

ಸಾರಥಿ ಇಲ್ಲದ ಮೈಸೂರು ವಿಶ್ವವಿದ್ಯಾಲಯ !

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು


ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಸ್ಥಾನ ಖಾಲಿಯಾಗಿ ತಿಂಗಳಾದರೂ ಹಂಗಾಮಿ ಕುಲಪತಿ ನೇಮಕ ಏಕೆ ಮಾಡಿಲ್ಲ?


ಇದು ಮೈಸೂರು ವಿವಿ ಆವರಣದಲ್ಲಿ ಕೇಳಿಬರುತ್ತಿರುವ ಪ್ರಶ್ನೆ. ಕುಲಪತಿ ಇಲ್ಲದೆ ನಿರ್ವಾತ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ ಹೊಸ ಕುಲಪತಿ ಅಥವಾ ಹಂಗಾಮಿ ಕುಲಪತಿಯನ್ನೂ ನಿಯೋಜಿಸಿಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ವಿಷಯ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರರು ಹಾಗೂ ವಿದ್ಯಾರ್ಥಿಗಳ ಹಂತದಲ್ಲೂ ವಿಚಾರ ಮಂಥನಕ್ಕೆ ಕಾರಣವಾಗಿದೆ.


ಮೈಸೂರು ವಿವಿ ಕುಲಪತಿ ಸ್ಥಾನಕ್ಕೆ ಪ್ರೊ.ಎನ್.ಕೆ.ಲೋಕನಾಥ್ ಅವರನ್ನು ನೇಮಕ ಮಾಡಿ 2023ರ ಮಾ.23ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಕುಲಪತಿ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಆದ್ದರಿಂದ ಲೋಕನಾಥ್ ಅವರ ನೇಮಕಾತಿಯನ್ನು ರದ್ದು ಮಾಡಬೇಕೆಂದು ಕೋರಿ ಪ್ರೊ.ಶರತ್ ಅನಂತಮೂರ್ತಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿರುವ ಕೋರ್ಟ್ ಪ್ರೊ.ಲೋಕನಾಥ್ ನೇಮಕಕ್ಕೆ ಜೂನ್ 21ರಂದು ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಮುಂದೂಡಿದೆ.


ಇದರಿಂದಾಗಿ ಸದ್ಯ ಕುಲಪತಿ ಸ್ಥಾನ ಖಾಲಿ ಇದ್ದು, ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2002ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕುಲಪತಿ ಸ್ಥಾನವನ್ನು ಯಾವುದೇ ಕಾರಣಕ್ಕೂ ಖಾಲಿ ಬಿಡಬಾರದು. ಹಾಗೆ ಮಾಡಿದರೆ ವಿವಿ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಕಾರಣಾಂತರಗಳಿಂದ ಕುಲಪತಿ ಸ್ಥಾನ ತೆರವಾದರೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬೇಕು

. ಹಂಗಾಮಿ ಕುಲಪತಿ ನಿಯೋಜನೆ ಮಾಡಬೇಕು. ಅದಕ್ಕಾಗಿ ಹಿರಿಯ ಡೀನ್ ಒಬ್ಬರನ್ನು ಆ ಸ್ಥಾನಕ್ಕೆ ಪ್ರಭಾರವಾಗಿ ನೇಮಕ ಮಾಡಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಆದಾಗ್ಯೂ, ಪ್ರಭಾರ ಕುಲಪತಿಯನ್ನು ಏಕೆ ನೇಮಕ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ.


ಈ ಹಿಂದಿನಂತೆ ಪರ್ಯಾಯ ವ್ಯವಸ್ಥೆ ಮಾಡಿ:
ಮೈಸೂರು ವಿವಿಯಲ್ಲಿ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. 1997ರಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದ ಪ್ರೊ.ಜೆ.ಶಶಿಧರ್ ಪ್ರಸಾದ್ ಅವರನ್ನು ಕುಲಪತಿ ಆಗಿ ನೇಮಕ ಮಾಡಿದ್ದ ಆದೇಶಕ್ಕೆ ತಡೆ ನೀಡಲಾಗಿತ್ತು. ಬಳಿಕ ಪ್ರೊ.ಎಸ್.ಎನ್.ಹೆಗ್ಡೆ ಅವರನ್ನು ಕುಲಪತಿಯಾಗಿ ನಿಯೋಜಿಸಲಾಗಿತ್ತು. 2 ಅವಧಿಗೆ ಒಟ್ಟು 6 ವರ್ಷಗಳ ಕಾಲ ಹೆಗ್ಡೆ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು.

ಇವರ ಬಳಿಕ 2003ರಲ್ಲಿ ಪ್ರೊ.ಜೆ.ಶಶಿಧರ್ ಪ್ರಸಾದ್ ಮತ್ತೆ ಕುಲಪತಿಯಾಗಿ ನೇಮಕಗೊಂಡು 4 ವರ್ಷ ಅಧಿಕಾರ ಅವಧಿ ಪೂರೈಸಿದ್ದರು. ಹಳೆಯ-ಹೊಸ ಪ್ರಕರಣವನ್ನು ಇಟ್ಟುಕೊಂಡು ಮೈವಿವಿ ವಲಯದಲ್ಲಿ ವಿವಿಧ ಚರ್ಚೆಗಳು ನಡೆಯುತ್ತಿವೆ. ಇದನ್ನು ಉದಾಹರಿಸಿ ಕುಲಪತಿ ಸ್ಥಾನಕ್ಕೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ.

ವಿವಿಧ ತೊಂದರೆಗೆ ನಾಂದಿ:
ಮೈಸೂರು ವಿಶ್ವವಿದ್ಯಾಲಯದ ದೈನಂದಿನ ಆಡಳಿತ, ಕಾರ್ಯನಿರ್ವಹಣೆಗೆ ಕುಲಸಚಿವೆ ವಿ.ಆರ್.ಶೈಲಜಾ ಮತ್ತು ಹಣಕಾಸು ಅಧಿಕಾರಿ ಡಾ.ಸಂಗೀತ ಗಜಾನನ್ ಭಟ್ ಅವರಿಗೆ ಅಧಿಕಾರ ನೀಡಲಾಗಿದೆ. ನಿತ್ಯದ ಅಗತ್ಯ ಕಾರ್ಯಚಟುವಟಿಕೆ ನಿರ್ವಹಣೆ, ಬೋಧಕ, ಬೋಧಕೇತರ ಸಿಬ್ಬಂದಿಗೆ ಸಂಬಳ, ನಿವೃತ್ತ ನೌಕರರಿಗೆ ಪಿಂಚಣಿ ಪಾವತಿ ಸೇರಿದಂತೆ ಇತರ ಚಟುವಟಿಕೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕು ಎಂದು ರಾಜ್ಯಪಾಲರು ನಿರ್ದೇಶಿಸಿದ್ದಾರೆ. ಆದರೆ, ಇದನ್ನು ಹೊರತುಪಡಿಸಿ, ಮಹತ್ವದ ತೀರ್ಮಾನ, ನೀತಿ ನಿರ್ಣಯಕ್ಕೆ ಕಡಿವಾಣ ಹಾಕಲಾಗಿದೆ. ಕುಲಪತಿ ಇಲ್ಲದ ಕಾರಣಕ್ಕೆ ಆಡಳಿತ ವ್ಯವಸ್ಥೆ ಕುಸಿದಿದೆ. ಬಹಳಷ್ಟು ಕೆಲಸ ಕಾರ್ಯಗಳು, ತೀರ್ಮಾನಗಳು ಬಾಕಿ ಉಳಿದಿವೆ. ಇದರಿಂದ ವಿವಿ, ವಿದ್ಯಾರ್ಥಿಗಳು, ಸಿಬ್ಬಂದಿ ತೊಂದರೆಗೆ ಸಿಲುಕಿದ್ದಾರೆ.

ಇನ್ನೂ ಘಟಿಕೋತ್ಸವ ಆಗಿಲ್ಲ:
2023ನೇ ಸಾಲಿನ ಘಟಿಕೋತ್ಸವ ಇನ್ನೂ ನಡೆದಿಲ್ಲ. ಪ್ರತಿವರ್ಷ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮ ಇದೀಗ ಅಡ್ಡಕತ್ತರಿಗೆ ಸಿಲುಕಿದೆ. ಘಟಿಕೋತ್ಸವ ಆಗದೆ ಪದವಿಯನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರ ನೀಡಲು ಆಗುತ್ತಿಲ್ಲ. ಖಾಲಿ ಆಗಿರುವ ಡೀನ್ ಸ್ಥಾನಗಳಿಗೂ ನೇಮಕಾತಿಯಾಗಿಲ್ಲ. ಸ್ವೀಕೃತಗೊಂಡಿರುವ ಪಿಎಚ್.ಡಿ ಮಹಾಪ್ರಬಂಧಗಳ ಮೌಲ್ಯಮಾಪನವಾಗಿಲ್ಲ. ಹೀಗೆ ಬಹುತೇಕ ಆಡಳಿತ, ಶೈಕ್ಷಣಿಕ ಚಟುವಟಿಕೆಗಳು ನನೆಗುದಿಗೆ ಬಿದ್ದಿವೆ.

ಇಬ್ಬರು ಡೀನ್‌ಗಳಿಗೆ ತಪ್ಪಿದ ಅವಕಾಶ
ಹಂಗಾಮಿ ಕುಲಪತಿ ಆಗುವ ಅವಕಾಶ ಇಬ್ಬರು ಡೀನ್‌ಗಳಿಗೆ ಕೈತಪ್ಪಿದೆ. ಕಲಾ ನಿಕಾಯದ ಡೀನ್ ಆಗಿದ್ದ ಪ್ರೊ.ಮುಜಾಫರ್ ಅಸ್ಸಾದಿ ಅವರ ಡೀನ್ ಸ್ಥಾನದ ಅವಧಿ ಮುಗಿದು, ಸೇವೆಯಿಂದಲೂ ನಿವೃತ್ತಿಯಾಗಿದ್ದಾರೆ. ಇವರ ನಂತರವಿದ್ದ ವಿಜ್ಞಾನ ನಿಕಾಯದ ಡೀನ್ ಪ್ರೊ.ಬಸವರಾಜಪ್ಪ ಅವರ ಅವಧಿ ಜು. 22ರಂದು ಮುಗಿದಿದ್ದು, ಜು. 31ಕ್ಕೆ ಸೇವೆಯಿಂದಲೂ ನಿವೃತ್ತಿ ಆಗಲಿದ್ದಾರೆ. ಸದ್ಯಕ್ಕೆ ಹಿರಿಯ ಡೀನ್ ಆಗಿ ಕಾನೂನು ನಿಕಾಯದ ಪ್ರೊ.ಟಿ.ಆರ್.ಮಾರುತಿ ಇದ್ದಾರೆ. ಇವರಿಗಾದರೂ ಹಂಗಾಮಿ ಕುಲಪತಿ ಆಗುವ ಅವಕಾಶ ದೊರೆಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ವಿಸಿ ಕೊಠಡಿಗೆ ಬೀಗ
ಕಳೆದ 33 ದಿನಗಳಿಂದ ವಿವಿ ಕಾರ್ಯಸೌಧದಲ್ಲಿರುವ ವಿಸಿ ಕೊಠಡಿಗೆ ಬೀಗ ಹಾಕಲಾಗಿದೆ. 107 ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ವಿವಿಯಲ್ಲಿ ಹಿಂದೆಂದೂ ಈ ರೀತಿ ಆಗಿರಲಿಲ್ಲ. ವಿವಿ ಚರಿತ್ರೆಯಲ್ಲೇ ಇದು ಕಪ್ಪುಚುಕ್ಕೆ ಎನಿಸಿದೆ ಎಂದು ಹಿರಿಯ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಹಂಗಾಮಿ ಕುಲಪತಿ ನೇಮಕ ಕುರಿತು ರಾಜಭವನದಿಂದಲೂ ಯಾವುದೇ ಆದೇಶ ಬಂದಿಲ್ಲ. ವಿಶ್ವವಿದ್ಯಾಲಯದ ದೈನಂದಿನ ಆಡಳಿತ, ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ವಿ.ಆರ್.ಶೈಲಜಾ, ಕುಲಸಚಿವೆ (ಆಡಳಿತ), ಮೈವಿವಿ