ಹಾಸನ: ಹಿರೀಸಾವೆ ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಬಳಿಯಿರುವ ಶ್ರೀ ಸದ್ಗುರು ಸಾಯಿ ಸಿದ್ಧಾಶ್ರಮದಲ್ಲಿ ಗುರುಪೂರ್ಣಿಮೆ ಮಹೋತ್ಸವದ ಪ್ರಯುಕ್ತ ಭಾನುವಾರ ಗಣಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆ 8.30ಕ್ಕೆ ಶ್ರೀ ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ ಮಾಡಲಾಯಿತು. ನಂತರ ಯಾಗ ಮಂಟಪದಲ್ಲಿ ಮಂಜುನಾಥ ಬಟ್ಟರ ತಂಡದವರು ಹೋಮ ಪ್ರಾರಂಭಿಸಿದರು. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಿತು.
ಬಳಿಕ ಆದಿಚುಂಚನಗಿರಿ ದಸರಿಘಟ್ಟ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ಭೂಮಿಯ ಮೇಲೆ ಸದಾಕಾಲ ಧಾರ್ಮಿಕ ಕಾರ್ಯಗಳು ಜರುಗಿದಂತೆಲ್ಲ ಸನಾತನ ಧರ್ಮ ಹಾಗೂ ಸಂಸ್ಕೃತಿ ಬೆಳೆಯುತ್ತಾ ಸಾಗುತ್ತದೆ ಎಂದರು.
ಆಧುನಿಕತೆ ಮುಂದುವರಿದಂತೆ ಆಧ್ಯಾತ್ಮಿಕ ವಿಚಾರಗಳಿಂದ ಮನುಷ್ಯ ದೂರ ಸರಿಯುತ್ತಿದ್ದಾನೆ. ಬದಲಾಗಬೇಕು ಆದರೆ ಆಚಾರ-ವಿಚಾರಗಲ್ಲ. ದೇವರ ಕೃಪೆ ಇಲ್ಲದೆ ಇಲ್ಲಿ ಏನು ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರದ ಜತೆಗೆ ಪ್ರಕೃತಿಯು ಉಳಿದಲ್ಲಿ ಮಾತ್ರ ಇಲ್ಲಿ ಸಕಲ ಜೀವ ಸಂಕುಲಗಳಿಗೂ ನೆಲೆ ಸಿಗಲಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯಗಳಲ್ಲಿಯೂ ಧರ್ಮವನ್ನು ಅಳವಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಸಾರ್ಥಕತೆ ಸಿಗುವುದಿಲ್ಲ ಎಂದು ಎಚ್ಚರಿಸಿದರು.
ಕಸಪಾ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಬಿ.ಮದನಗೌಡ ದಂಪತಿ ಹೋಮ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಸೋಮವಾರ ವಿವಿಧ ಪೂಜೆಗಳು ನಡೆಯಲಿವೆ.