ಜಿಲ್ಲೆ

ಸಾಯಿ ಸಂಘಕ್ಕೆ ೯೦.೫೫ ಲಕ್ಷ ರೂ. ಗಳಿಕೆ

ಚಿಕ್ಕೋಡಿ: ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿರುವ ಶ್ರೀ ಸಾಯಿ ಸೌಹಾರ್ದ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ ೯೦.೫೫ ಲಕ್ಷ ರೂ. ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.

ಇಲ್ಲಿನ ಸಾಯಿ ಸಹಕಾರಿಯ ಸಭಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಯಿ ಸಹಕಾರಿಯು ಇಂದು ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಸಾಯಿ ಸಹಕಾರಿಯು ಕೊನೆಗೊಂಡ ಆರ್ಥಿಕ ವರ್ಷಕ್ಕೆ ೧೨ ವರ್ಷ ಪೂರೈಸಿದ್ದು ೧೦೦.೯೬ ಲಕ್ಷ ರೂ. ಠೇವು ಸಂಗ್ರಹಿಸಿರುವುದು ಹೆಮ್ಮೆಯ ವಿಷಯ ಎಂದರು.

ಸಹಕಾರಿಯು ೭,೦೨೩ ಸದಸ್ಯರನ್ನು ಹೊಂದಿ ೯೪.೪೪ ಲಕ್ಷ ರೂ. ಷೇರು ಬಂಡವಾಳ ಹೊಂದಿದೆ. ೬ ಕೋಟಿ ೬೧ ಲಕ್ಷ ರೂ. ಕಾಯ್ದೆ ನಿಧಿ, ಆರ್ಥಿಕ ವರ್ಷದಲ್ಲಿ ೫೯.೯೧ ಕೋಟಿ ರೂ. ಸಾಲ ಇದ್ದು, ಶೇ.೯೮ ಸಾಲ ವಸೂಲಾತಿಯಲ್ಲಿ ಸಾಧನೆ ಮಾಡಿದೆ. ಆರ್ಥಿಕ ವರ್ಷದಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಸಹಕಾರಿಯು ೩೨.೮೫ ಕೋಟಿ ರೂ. ಗಳ ಗುಂತಾವಣೆ ಹೊಂದಿದ್ದು, ೩೦ ಶಾಖೆಗಳೊಂದಿಗೆ ಮುನ್ನಡೆದಿದೆ ಸಹಕಾರಿಯ ಒಟ್ಟು ದುಡಿಯುವ ಬಂಡವಾಳ ೧೧೪.೮೩ ಕೋಟಿ ರೂ. ಗಳಷ್ಟಿದ್ದು ಆರ್ಥಿಕವಾಗಿ ಸಹಕಾರಿಯು ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದರು.

ಉಪಾಧ್ಯಕ್ಷ ಷಡಕ್ಷರಿ ಮೂಗೇರಿ, ನಿರ್ದೇಶಕ ಸಂಜಯ ಗಿಡವಿರ, ಲೋಕಪ್ಪ ದುಂಬಾಳಿ, ಹೇಮಂತ ಹಂಪಣ್ಣವರ, ರಾಘವೇಂದ್ರ ಡಂಬಳ, ಮಹಾಂತೇಶ ಕವಲಾಪೂರೆ, ರಮೇಶ ಕುಡತರಕರ, ಚಂದ್ರಕಾಂತ ಬುರುಡ, ಮನೋಜಕುಮಾರ ಸಮ್ಮತಶೆಟ್ಟಿ, ರಾಜಕುಮಾರ ಹಿರೇಮಠ, ಮನೋಹರ ಚಾವಲಾ, ಎರಿಸ್ವಾಮಿ ಇಟಗೋನಿ, ಪ್ರಧಾನ ವ್ಯವಸ್ಥಾಪಕ ರಾಜಶೇಖರ ಸ್ವಾಮಿ ಇತರರಿದ್ದರು.