ತೀರ್ಥಹಳ್ಳಿ: ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಶ್ರಾವಣ ಮಾಸ ವಿಶೇಷ ಮಹತ್ವ ಪಡೆದಿದೆ. ಈ ಮಾಸದಲ್ಲಿ ವರಮಹಾಲಕ್ಷ್ಮೀ ವ್ರತ ಸೇರಿದಂತೆ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಹಿಂದುಗಳಿಗೆ ಅತ್ಯಂತ ಶ್ರೇಷ್ಠವಾದ ಈ ಹಬ್ಬದ ಆಚರಣೆಯಲ್ಲಿ ಸೇರಿರುವ ಮಹಿಳೆಯರನ್ನು ಕಂಡಾಗ ಭಾರತ ಕಟ್ಟಲು ಇಷ್ಟು ಸಾಕು ಎನಿಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶುಕ್ರವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಆಯೋಜಿಸಲಾಗಿದ್ದ ವರಮಹಾಲಕ್ಷ್ಮೀ ವ್ರತದಲ್ಲಿ ಪಾಲ್ಗೊಂಡು ಮಾತನಾಡಿ, ಇಂತಹ ವ್ರತಾಚರಣೆಯನ್ನು ಮನೆಗಳಲ್ಲಿ ಮಾಡುವುದಕ್ಕಿಂತ ಸಾರ್ವತ್ರಿಕವಾಗಿ ಎಲ್ಲರೂ ಒಂದೆಡೆ ಸೇರಿ ಆಚರಿಸುವುದರಿಂದ ಧರ್ಮ ಸ್ಥಾಪನೆ ಮತ್ತು ಭಾರತ ನಿರ್ಮಾಣ ಕಾರ್ಯಕ್ಕೆ ಹೆಚ್ಚು ಒತ್ತು ದೊರೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಲೆ ಕೆಟ್ಟ ರಾಜಕಾರಣಿಯೊಬ್ಬ ಸನಾತನ ಧರ್ಮದ ವಿರುದ್ಧ ಮಾತನಾಡಿರುವುದು ಖಂಡನೀಯವಾಗಿದೆ. ಹಿಂದು ಧರ್ಮಕ್ಕೆ ವಿರುದ್ಧವಾಗಿ ಮಾತನಾಡುವ ಮನೋಭಾವವನ್ನು ನಿಯಂತ್ರಿಸಿ, ದೇಶದಲ್ಲಿ ಧರ್ಮ ಸ್ಥಾಪನೆಗೆ ಮುಂದಾಗುವ ಅಗತ್ಯವಿದೆ. ನಮ್ಮ ಸರ್ಕಾರ ತಂದಿರುವ ಗೋಹತ್ಯೆ ನಿಷೇಧವನ್ನು ಈಗಿನ ಸರ್ಕಾರ ರದ್ದು ಪಡಿಸಲು ಮುಂದಾಗಿದೆ ಎಂದು ದೂರಿದರು.
ಹೆಣ್ಣು ಮಕ್ಕಳ ಸಬಲೀಕರಣದ ಸಲುವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿತ್ತು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತಿದೆ. ಆಯುಷ್ಮಾನ್ ಯೋಜನೆಯಲ್ಲಿ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು, ಜನೌಷಧದಲ್ಲಿ ಅತಿ ಕಡಿಮೆ ದರದಲ್ಲಿ ಔಷಧ ಒದಗಿಸಲಾಗುತ್ತಿದೆ. ಮಹಿಳೆಯರಿಗಾಗಿ ಹತ್ತು ಹಲವು ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದು ಹೇಳಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಡವರನ್ನು ಸೇರಿಸಿಕೊಂಡು ಇಂತಹ ಧಾರ್ಮಿಕ ಆಚರಣೆಗಳ ಬಗ್ಗೆ ವಿರೋಧ ಪಕ್ಷದವರು ಲೇವಡಿ ಮಾಡುತ್ತಿರುವುದಕ್ಕೆ ಈ ಕಾರ್ಯಕ್ರಮ ಉತ್ತರ ನೀಡುವಂತಿದೆ. ನಿರೀಕ್ಷೆಗೂ ಮೀರಿ ಜನ ಇಲ್ಲಿ ಸೇರಿದ್ದಾರೆ. ಜಿಲ್ಲೆಗೆ ವಿಮಾನ ನಿಲ್ದಾಣ, ತಾಲೂಕಿಗೆ 64 ಸಮುದಾಯ ಭವನ, ಹೊಸ ಸೇತುವೆಗಳು ಹೀಗೆ ಹತ್ತು ಯೋಜನೆಗಳು ಸಂಸದರಿಂದ ತಾಲೂಕಿಗೆ ಮಂಜೂರಾಗಿದೆ ಎಂದರು.
ನನ್ನ ತಾಯಿ ಇಂದು ಬದುಕಿಲ್ಲ ನಿಮ್ಮಲ್ಲಿ ನನ್ನ ತಾಯಿಯನ್ನು ಕಾಣುತ್ತಿದ್ದೇನೆ. ಹೆಣ್ಣು ಮಕ್ಕಳ ಕಲಿಕೆಗೆ ಸರ್ಕಾರಿ ಕಾಲೇಜು ತಂದಿದ್ದೇನೆ. ನನ್ನ ಮಗಳು ಮತ್ತು ಅತ್ತೆ ಅಪಘಾತದಲ್ಲಿ ತೀರಿಕೊಂಡಿದ್ದ ಭಾರತಿಪುರ ತಿರುವಿನಲ್ಲಿ 56 ಕೋಟಿ ರೂ. ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣವಾಗುತ್ತಿದೆ. ಜಲಜೀವನ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ. ಮುಂಬರುವ ಚುನಾವಣೆಯಲ್ಲಿ ನಿಮ್ಮೆಲ್ಲರ ಬೆಂಬಲ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ವೈ.ರಾಘವೇಂದ್ರ ಅವರ ಮೇಲಿರಲಿ ಎಂದು ಕೋರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯಕ್, ಪ್ರಮುಖರಾದ ಗೀತಾ ಶೆಟ್ಟಿ, ಸವಿತಾ ಉಮೇಶ್, ಕೆ.ನಾಗರಾಜ ಶೆಟ್ಟಿ, ದತ್ತಾತ್ರಿ, ಅಶೋಕಮೂರ್ತಿ ಇತರರಿದ್ದರು.