ಜಿಲ್ಲೆ

ಸಾಮೂಹಿಕ ಪ್ರಾರ್ಥನೆ, ಇಫ್ತಾರ್ ನಿಷೇಧ

ಕಲಬುರಗಿ: ರಂಜಾನ್ ನಿಮಿತ್ತ ರೋಜಾ ಮಾಡುವವರು ಇಫ್ತಾರ್ ಹೆಸರಿನಲ್ಲಿ ಮತ್ತು ಪ್ರಾರ್ಥನೆ ಹೆಸರಿನಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಎಲ್ಲರೂ ಸಹಕರಿಸಬೇಕೆಂದು ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮನವಿ ಮಾಡಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ಕಡೆ ರೋಜಾ ಶುರುವಾಗಿದೆ. ಪ್ರಾರ್ಥನೆಯನ್ನು ಮನೆಗಳಲ್ಲಿ ಮಾಡುವ ಮೂಲಕ ಈ ರೋಗದ ವಿರುದ್ಧ ಸಮರ ಸಾರಬೇಕೆಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೋಮ್ ಕ್ವಾರಂಟೈನ್ ಆಗಿರುವ ಕರೊನಾ ಶಂಕಿತರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿ ಪ್ರತಿದಿನ ಅವರಿರುವ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರಲ್ಲದೇ ವಿಶೇಷ ನಿಗಾ ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕ್ವಾರಂಟೈನ್ದಲ್ಲಿರುವರು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಎಲ್ಲರೂ ಲಾಕ್ಡೌನ್ ನಿಯಮ ಪಾಲಿಸಬೇಕು.
ಯಾರಿಗಾದರೂ ನಿಯಮ ಉಲ್ಲಂಘನೆ ಕಂಡರೆ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಆರಂಭಿಸಿರುವ ಪೊಲೀಸ್ ಸಹಾಯವಾಣಿ ಸಂಖ್ಯೆ 08472-263604 ಸಂಖ್ಯೆಗೆ ಕರೆ ನೀಡಿ ಮಾಹಿತಿ ನೀಡಬಹುದು ಎಂದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಇಲ್ಲವೇ ಜನರು ಗುಂಪಾಗಿ ಸೇರುವುದು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವರ ವಿರುದ್ಧ ರೌಡಿ ಶೀಟ್ ಸಹ ತೆರೆಯಲಾಗಿದೆ. ಅವರ ಮುಂದಿನ ವರ್ತನೆಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಜೇವರ್ಗಿ ಸೇರಿ ಇನ್ನಿತರ ಕಡೆಗಳಲ್ಲಿ ಸಿಲುಕಿರುವ ಅನ್ಯ ಜಿಲ್ಲೆಗಳ ಕಾರ್ಮಿಕರನ್ನು ಮರಳಿ ಅವರ ಊರುಗಳಿಗೆ ಕಳುಹಿಸಿಕೊಡಲು ಡಿಸಿಯವರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ಎಸ್ಪಿ ಹೇಳಿದರು.
ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಉಪಸ್ಥಿತರಿದ್ದರು.

ರೈತರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ
ಕರೊನಾ ಹಾವಳಿ ಹೊತ್ತಿನಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೃಷಿ ಇಲಾಖೆಯು ಅಗ್ರಿ ವಾರ್ ರೂಂ ಸ್ಥಾಪಿಸಿದೆ ರೈತರ ಸಮಸ್ಯೆಗಳಿದ್ದಲ್ಲಿ 08472-278628 ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ ಮುಂಗಾರು ಹಂಗಾಮಿ ಹೊತ್ತಿನಲ್ಲಿ ಬೀಜ-ಗೊಬ್ಬರ ಪಡೆದುಕೊಳ್ಳುವ ಕಾಲಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.
| ಯಡಾ ಮಾರ್ಟಿನ್ ಮಾರ್ಬನ್ಯಾಂಗ್
ಎಸ್ಪಿ ಕಲಬುರಗಿ