ಕೊಪ್ಪಳ: ಸಾಮಾನ್ಯರಿಗಾಗಿ ಅಂಚೆ ಇಲಾಖೆಯಿಂದ ಕಡಿಮೆ ದರದಲ್ಲಿ ಅಪಘಾತ, ಜೀವ ವಿಮೆಗಳನ್ನು ಪರಿಚಯಿಸಲಾಗಿದೆ. ಪತ್ರಕರ್ತರು ವಿಮೆ ಮಾಡಿಸಿಕೊಂಡಿದ್ದು ಉತ್ತಮ ಕೆಲಸ ಎಂದು ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ ಹೇಳಿದರು.
ನರದ ಮೀಡಿಯಾ ಕ್ಲಬ್‌ನಲ್ಲಿ ಪತ್ರಕರ್ತರಿಗೆ ವಿಮೆ ಮಾಡಿಸುವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸಾಮಾನ್ಯವರ್ಗದ ಜನರು ಸಾವಿರಾರು ರೂ. ವ್ಯಯಿಸಿ ವಿಮೆ ಮಾಡಿಸಿಕೊಳ್ಳುವಷ್ಟು ಶಕ್ತರಿರುವುದಿಲ್ಲ. ಅಂಥವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ಕಡಿಮೆ ದರದ ವಿಮೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಅಪಘಾತ, ಜೀವ ವಿಮೆಗಳಿವೆ. ಜತೆಗೆ ಪಿಂಚಣಿ ಯೋಜನೆಗಳಿವೆ. ಪತ್ರಕರ್ತರು ನಿತ್ಯ ಓಡಾಟದಲ್ಲಿರುತ್ತಾರೆ. ಹೀಗಾಗಿ ಅಪಘಾತ ವಿಮೆ ಮಾಡಿಸಿಕೊಂಡಲ್ಲಿ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಮೀಡಿಯಾ ಕ್ಲಬ್‌ನಿಂದ ಎಲ್ಲ ಸದಸ್ಯರಿಗೆ ವಿಮೆ ಮಾಡಿಸುತ್ತಿರುವುದು ಉತ್ತಮ ಕೆಲಸ ಎಂದರು.
ಮಾರುಕಟ್ಟೆ ಪ್ರತಿನಿಧಿ ಅಡಿವೆಪ್ಪ ಕವಿತಾಳ ಮಾತನಾಡಿ, ಗ್ರೂಪ್ ಆ್ಯಕ್ಸಿಡೆಂಟ್ ಗಾರ್ಡ್ ಹೆಸರಿನಲ್ಲಿ ನಮ್ಮ ಇಲಾಖೆಯಲ್ಲಿ ಬಜಾಜ್ ಆಲಿಯಾಂಜ್ ಮತ್ತು ಟಾಟಾ ಎಐಜಿ ಕಂಪನಿಗಳಿಂದ ಅಪಘಾತ ವಿಮಾ ಯೋಜನೆಗಳಿವೆ. 399ರೂ. ವಾರ್ಷಿಕ ಕಂತು ಪಾವತಿಸಬೇಕು. ಇದರಿಂದ ಅಪಘಾತದಿಂದ ಮೃತಪಟ್ಟಲ್ಲಿ, ಶಾಶ್ವತ ಅಂಗವಿಕಲರಾದಲ್ಲಿ, ಭಾಗಶಃ ವಿಕಲಾದರೆ, ಅಪಘಾತದಿಂದ ಪಾರ್ಶ್ವವಾಯುವಾದಲ್ಲಿ 10 ಲಕ್ಷ ರೂ.ವರೆಗೆ ಪರಿಹಾರ ಪಡೆಯಬಹುದು.
ಮಕ್ಕಳ 1 ವರ್ಷದ ಶೈಕ್ಷಣಿಕ ವೆಚ್ಚಕ್ಕೆ 1 ಲಕ್ಷ ರೂ., ಮೃತರ ಕುಟುಂಬದವರ ಸಾರಿಗೆ ವೆಚ್ಚಕ್ಕೆ 25 ಸಾವಿರ ರೂ., ಅಂತ್ಯ ಸಂಸ್ಕಾರಕ್ಕೆ 5 ಸಾವಿರ ರೂ. ನೆರವು ನೀಡಲಾಗುವುದು. ಉಳಿದಂತೆ ಅಪಘಾತವಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ 60 ಸಾವಿರ ರೂ., ಹೊರ ರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ 30 ಸಾವಿರ ರೂ., ನಿತ್ಯ ಆಸ್ಪತ್ರೆ ಖರ್ಚಿಗೆ 10 ಸಾವಿರ ರೂ. ಸಿಗಲಿದೆ ಎಂದು ವಿವರಿಸಿದರು.
ಕ್ಲಬ್ ಸದಸ್ಯರಿಗೆ ವಿಮೆ ಮಾಡಿಸಲಾಯಿತು. ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ, ಕೊಪ್ಪಳ ಪೋಸ್ಟ್ ಮಾಸ್ಟರ್ ಭೀಮಸೇನ ಜೋಶಿ, ಪೋಸ್ಟ್‌ಮ್ಯಾನ್‌ಗಳಾದ ಯಲ್ಲಪ್ಪ ಸಂಗಟಿ, ಎಣ.ಬಿ.ತಾಡಪತ್ರಿ, ಮಹಮದ್ ಹುಸೇನ್ ಇದ್ದರು.