ಬಾಗಲಕೋಟೆ ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಅಧ್ಯಕ್ಷತೆಯಲ್ಲಿ ಜರುಗಿತು. ಉಪಾಧ್ಯಕ್ಷೆ ಶೋಭಾರಾವ, ಶಾಸಕ ಎಚ್.ವೈ.ಮೇಟಿ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಆಯುಕ್ತ ಆರ್.ವಾಸಣ್ಣ ಇದ್ದರು. 
ಜಿಲ್ಲೆ

ಸಾಮಾನ್ಯ ಸಭೆಯಲ್ಲಿ ಹಸ್ತಾಂತರ ಪ್ರತಿಧ್ವನಿ…!

ಬಾಗಲಕೋಟೆ: ನವನಗರದ ಯೂನಿಟ್-೧ ಹಸ್ತಾಂತರ ವಿಷಯ ಮತ್ತೆ ಮುನ್ನಲೆಗೆ ಬಂದಿದ್ದು, ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ಶಾಸಕ ಎಚ್.ವೈ.ಮೇಟಿ ಹಾಗೂ ಬಿಜೆಪಿ ಸದಸ್ಯರ ನಡುವೇ ಜಟಾಪಟಿಗೆ ಕಾರಣವಾಯಿತು. ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗದಂತಾಯಿತು…!!

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ನವನಗರ ಯೂನಿಟ್-೧ ಹಸ್ತಾಂತರ ವಿಷಯ ಚರ್ಚೆಗೆ ಗ್ರಾಸ್‌ವಾಯಿತು. ನೀರು, ಚರಂಡಿ, ಆಸ್ಪತ್ರೆ, ಶಾಲೆ ಸೇರಿದಂತೆ ಎಲ್ಲ ಸೌಕರ್ಯ ಹೊಂದಿರುವ ನವನಗರ ಯೂನಿಟ್-೧ ನಗರಸಭೆಗೆ ಹಸ್ತಾಂತರಗೊಳ್ಳಬೇಕು ಅಂತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯೂನಿಟ್-೨, ೩ ಹಸ್ತಾಂತರ ಸದ್ಯಕ್ಕೆ ಇಲ್ಲ. ಜನರ ತೆರಿಗೆ ಸಂಗ್ರಹಿಸಿ ನಿರ್ವಹಣೆ ಮಾಡಲು ಸಾಧ್ಯವಿದೆ. ಇಂದೆಲ್ಲ, ನಾಳೆ ಈ ಪ್ರಕ್ರಿಯೆ ನಡೆಯಬೇಕು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ತಿಳಿಸಿದರು.


ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಬಸವರಾಜ ಅವರಾದಿ, ವಿ.ವಿ.ಶಿರಗನ್ನವರ, ಶ್ರೀನಾಥ ಸಜ್ಜನ, ಜ್ಯೋತಿ ಭಜಂತ್ರಿ, ಯಲ್ಲಪ್ಪ ನಾರಾಯಣಿ, ನಗರಸಭೆಯಿಂದ ನವನಗರ ಯೂನಿಟ್-೧ ನಿರ್ವಹಣೆ ಸಾಧ್ಯವಿಲ್ಲ. ಈಗಿರುವ ಸಿಬ್ಬಂದಿಗಳಿಂದಲೇ ಹಳೆ ಬಾಗಲಕೋಟೆ, ವಿದ್ಯಾಗಿರಿ ನಿರ್ವಹಣೆ ಮಾಡಲಾಗುತ್ತಿಲ್ಲ. ಇನ್ನೂ ಸ್ವಚ್ಛ ಮಾಡಲು ಪೌರ ಕಾರ್ಮಿಕರೂ ಕೂಡ ತುಂಬಾ ಕಡಿಮೆ ಇದ್ದಾರೆ. ಅಗತ್ಯವಾದ ಇಂಜಿನಿಯರಗಳು ಸಂಖ್ಯೆ ತೀರಾ ಕಡಿಮೆ ಇರುವಾಗ ಹಸ್ತಾಂತರ ವಿಷಯ ಬಿಟ್ಟು ಅಭಿವೃದ್ಧಿ ವಿಷಯ ಕುರಿತು ಚರ್ಚೆ ನಡೆಸಿ ಎಂದು ಒತ್ತಾಯಿಸಿದರು.

ಕಳ್ಳರು ಹೆಚ್ಚಾಗಿದ್ದಾರೆ : ನವನಗರದ ಯುನಿಟ್ ೨ ರಲ್ಲಿ ಮನೆಗಳನ್ನು ಕಟ್ಟಲು ಹೋಗುವ ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಇಲ್ಲ. ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು. ಬಸ್ ಸೌಲಭ್ಯ, ಆರೋಗ್ಯ ಸೇವೆ ನೀಡಬೇಕು ಎಂದು ಬಿಜೆಪಿ ಸದಸ್ಯೆ ಶಶಿಕಲಾ ಮಜ್ಜಗಿ ಆಗ್ರಹಿಸಿದರು.

ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ನವನಗರ ಯೂನಿಟ್-ಹಸ್ತಾಂತರ ಮಾಡುವುದು ಸುಲಭದ ವಿಷಯವಲ್ಲ. ನಗರಸಭೆ ಗೆ ಆದಾಯವಿಲ್ಲ. ಬಿಟಿಡಿಎದಲ್ಲಿ ಇದಕ್ಕೆ ವಿಶೇಷ ಅನುದಾನವಿದೆ. ಯಾವುದೇ ಕಾರಣಕ್ಕೂ ದುಡಿಕಿನ ನಿರ್ಧಾರ ಮಾಡಬಾರದು. ಇನ್ನು ಕಾರ್ಫಸ್ ಫಂಡ್ ಇಲ್ಲ. ನಗರಸಭೆಗೆ ಅದನ್ನು ಸಹಿತ ಹಸ್ತಾಂತರ ಮಾಡಿದ್ದರೇ ಒಂದು ಸ್ವಲ್ಪ ವಿಚಾರ ಮಾಡಬಹುದು. ಮುಖ್ಯವಾಗಿ ಬಾಗಲಕೋಟೆ ನಗರಸಭೆ ಮೇಲ್ದರ್ಜೆಗೆ ಏರಿಸಿ ಮಹಾನಗರ ಪಾಲಿಕೆ ಮಾಡಬೇಕು ಅಭಿಪ್ರಾಯಪಟ್ಟರು.

ಒಳಚರಂಡಿ ಕೆಲಸ ಮಾಡಿ : ನವನಗರ,ವಿದ್ಯಾಗಿರಿ, ಹಳೆ ಬಾಗಲಕೋಟೆಯಲ್ಲಿ ಹೆಚ್ಚಾಗಿ ಒಳಚರಂಡಿ ಸಮಸ್ಯೆ ನಿತ್ಯ ಜನ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಬಿಟಿಡಿಎ ನಿರ್ವಹಣೆ ಮಾಡಬೇಕು ಎಂದು ಬಿಜೆಪಿ ಸದಸ್ಯ ವೀರಣ್ಣ ಶಿರಗ್ಗಣ್ಣವರ ಸಭೆ ಗಮನಸೆಳೆದರು.

ಅಧಿಕಾರಿಗಳ ವಿರುದ್ಧ ಸದಸ್ಯರ ಗುಟುರು: ನಗರದ ವಿವಿಧೆಡೆ ಸ್ವಚ್ಛತೆ ಇಲ್ಲ. ಒಳ ಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದೆ. ರಸ್ತೆಗಳ ಸುಧಾರಣೆ ಆಗುತ್ತಿಲ್ಲ. ಈ ಬಗ್ಗೆ ಗಮನಕ್ಕೆ ತರಲು ಹೋದರೇ ನಗರಸಭೆ ಅಧಿಕಾರಿಗಳು ಕರೆ ಸ್ವೀಕರಿಸುವದಿಲ್ಲ. ನಾವು ಯಾರ ಮುಂದೆ ಹೇಳಬೇಕು. ಸದಸ್ಯರಿಗೆ ಕೊಡುವ ಗೌರವ ಇದೇನಾ ಅಂತ ಅಧಿಕಾರಿಗಳ ವಿರುದ್ಧ ಗುಟುರು ಹಾಕಿದರು.

ಇನ್ನು ಸರ್ಕಾರದ ಯೋಜನೆಗಳಿಗೆ ಅಽಕಾರಿಗಳು ತಮ್ಮ ಮನಸೋ ಇಚ್ಛೆ ಅರ್ಜಿ ಕರೆದು ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆಂದು ಸದಸ್ಯೆ ಶಶಿಕಲಾ ಮಜ್ಜಗಿ ಸಭೆಯಲ್ಲಿ ಹೇಳುತ್ತಿದ್ದಂತೆ ಎಲ್ಲ ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಚ್.ವೈ.ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ತಕ್ಷಣ ಅರ್ಜಿ ಕರೆದ ದಿನಾಂಕ ವಿಸ್ತರಿಸಬೇಕು ಎಂದು ಸೂಚನೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ಶೋಭಾ ರಾವ್, ನಗರಸಭೆ ಸದಸ್ಯರಾದ ಹಾಜಿಸಾಬ್ ದಂಡಿನ್, ಚನ್ನವೀರ ಅಂಗಡಿ, ರವಿ ದಾಮಜಿ, ಲಕ್ಷ್ಮಣ ಮುಚಖಂಡಿ ಸೇರಿದಂತೆ ಇತರರಿದ್ದರು.