ಹಾಸನ: ಹಾಸನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯವಾರು ಚರ್ಚೆ ಒಂದು ನಡೆಯದೆ, ಕೇವಲ ಆರೋಪ-ಪ್ರತ್ಯಾರೋಪ ಗದ್ದಲದಲ್ಲಿ ಸಭೆಯನ್ನ ಮುಕ್ತಾಯ ಮಾಡಲಾಯಿತು.
ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಅಧ್ಯಕ್ಷ ಎಂ.ಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ಅಧಿಕಾರಿಗಳನ್ನು ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರಿಗೆ ನೋಟಿಸ್ ನೀಡುವಂತೆ ಆಗ್ರಹಿಸಿದರು. ನಂತರ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಎಲ್ಲ ಅಧಿಕಾರಿಗಳು ಸಭೆಗೆ ತಪ್ಪದೆ ಹಾಜರಾಗಬೇಕು ಎಂದು ಸೂಚನೆ ನೀಡಿದರು.
ಸಭೆ ಪ್ರಾರಂಭಕ್ಕೂ ಮೊದಲೇ ಕೆಲ ಸದಸ್ಯರು ಕಳೆದ ಹಲವು ವರ್ಷಗಳಿಂದಲೂ ಕೂಡ ಮೈಕ್ ವ್ಯವಸ್ಥೆ ಸರಿಯಾಗಿಲ್ಲ. ಇದಕ್ಕೆ ಲಕ್ಷಾಂತರ ಹಣವನ್ನ ಈ ಹಿಂದೆ ಖರ್ಚು ಮಾಡಲಾಗಿದೆ. ಆದರೆ ಈ ಬಗ್ಗೆ ಪ್ರತಿ ಸಭೆಯಲ್ಲಿಯೂ ಕೂಡ ಚರ್ಚೆ ಮಾಡುತ್ತೇವೆ.ಇದುವರೆಗೂ ಏಕೆ ಸರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಮೈಕ್‌ಗಾಗಿ 22 ಲಕ್ಷ ರೂ. ಬಿಲ್ ಮಾಡಲಾಗಿದೆ. ಒಂದು ದಿನವೂ ಆನ್ ಆಗಿಲ್ಲ ಎಂದು ಸದಸ್ಯರಾದ ಕ್ರಾಂತಿ, ಗಿರೀಶ್ ಚನ್ನವೀರಪ್ಪ, ಮೋಹನ್, ಸಂತೋಷ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಚಂದ್ರೇಗೌಡ ಅವರು ಮಾತನಾಡಿ, ಹಿಂದಿನ ಅಧಿಕಾರಿಗಳು ಹಳೆಯ ಮೈಕ್‌ಗಳನ್ನೇ ರಿಪೇರಿ ಮಾಡಿ ಬಿಲ್ ಮಾಡಿಕೊಂಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ತಪ್ಪಿತಸ್ಥರ ಅಧಿಕಾರಿ ಹಾಗು ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು. ಯಾರ ಅವಧಿಯಲ್ಲಿ ಇದೆಲ್ಲಾ ನಡೆದಿದೆ ಎಂಬುದನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು. ಅಗತ್ಯ ಬಿದ್ದರೆ ಲೋಕಾಯುಕ್ತ ತನಿಖೆಗೆ ವಹಿಸಲಾಗುವುದು ಹೇಳಿದರು.
ಸದಸ್ಯ ಎಚ್.ಸಿ.ಮಂಜುನಾಥ್ ಮಾತನಾಡಿ, ಬೂವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 538ರಲ್ಲಿ 4 ಎಕರೆ ಜಮೀನನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಭೂ ಪರಿವರ್ತನೆ, ಸರ್ವೆ, ಯೋಜನೆ ಇಲ್ಲದೆ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಖಾತೆ ಮಾಡಿಕೊಡಲಾಗಿದೆ. ಆಯುಕ್ತ ನರಸಿಂಹಮೂರ್ತಿ ಒಳ ಒಪ್ಪಂದ ಮಾಡಿಕೊಂಡು ಖಾತೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದರು. ಜಾಗ ಸರ್ವೆ ಮಾಡದೆ ಖಾತೆ ಮಾಡಿದ್ದು ಹೇಗೆ, ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದರೂ ಸುಮನಿರಬೇಕಾ. ನಿಮ ಎಲ್ಲಾ ಬಂಡವಾಳ ಬಯಲು ಮಾಡುತ್ತಾನೆ. ಎಲ್ಲಾ ದಾಖಲೆಗಳು ನನ್ನ ಬಳಿ ಇದೆ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಆಗ ತಾಳ್ಮೆ ಕಳೆದುಕೊಂಡ ಆಯುಕ್ತ ನರಸಿಂಹಮೂರ್ತಿ ಸಹ, ಒಳ ಒಪ್ಪಂದ ಪದ ಏಕೆ ಬಳಸುತ್ತೀರಿ. ನೀವು ಫೈಲ್ ಹಿಡಿದುಕೊಂಡು ನನ್ನ ಬಳಿ ಬಂದಾಗ ನಾನು ಸಹ ಹಾಗೆಯೇ ಕರೆಯಬೇಕಾ. 1964ರ ಸ್ಥಳೀಯ ಸಂಸ್ಥೆಗಳ ಕಾಯ್ದೆ ಪ್ರಕಾರ ಖಾತೆ ಮಾಡಿಕೊಟ್ಟಿದ್ದೇನೆ. ನನ್ನ ಅಧೀನ ಸಿಬ್ಬಂದಿಗೆ ಕಾಯ್ದೆ ಗೊತ್ತಿಲ್ಲದ ಕಾರಣ ನಾನೇ ಕಡತ ಪರಿಶೀಲಿಸಿ ಕ್ರಮ ಕೈಗೊಂಡಿದ್ದೇನೆ. ಈ ಬಗ್ಗೆ ನಿಮ ಆಕ್ಷೇಪಣೆಗಳು ಏನೇ ಇದ್ದರೂ ಜಿಲ್ಲಾಧಿಕಾರಿ ಅಥವಾ ಸರ್ಕಾರಕ್ಕೆ ದೂರು ನೀಡಬಹುದು. ಸಾಮಾನ್ಯ ಸಭೆಯಲ್ಲಿ ಈ ರೀತಿ ಉದ್ವೇಗಕ್ಕೆ ಒಳಗಾಗಿ ಮಾತನಾಡುವುದು ಖಂಡನೀಯ ಎಂದು ತಿರುಗೇಟು ನೀಡಿದರು.
ನಗರಸಭೆ ಸದಸ್ಯರು ಒಳ ಒಪ್ಪಂದ ಮಾಡಿಕೊಂಡು ಫೈಲ್ ಹಿಡಿದುಕೊಂಡು ಬರುತ್ತಾರೆಂದು ಹೇಳುವುದು ಆಯುಕ್ತರ ದರ್ಪದ ಮಾತು. ಅಧಿಕಾರಿಯಾಗಿ ಸದಸ್ಯರಿಗೆ ಅಗೌರವ ತೋರುವುದು ತರವಲ್ಲ. ಕೂಡಲೇ ಕ್ಷಮೆಯಾಚಿಸಬೇಕೆಂದು ಎಲ್ಲಾ ಸದಸ್ಯರು ಪಟ್ಟು ಹಿಡಿದರು. ಆಗ ಮಧ್ಯ ಪ್ರವೇಶಿಸಿದ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಅವರು, ಸದಸ್ಯ ಮಂಜುನಾಥ್ ಅವರ ಆರೋಪಕ್ಕೆ ಸಂಬಂಧಿಸಿ ಮಾಹಿತಿ ಒದಗಿಸಿ ಎಂದಾಗ, ಕಂದಾಯ ಅಧಿಕಾರಿ ಅಭಿಲಾಷ್ ಅವರು ಮೂರು ಪುಟಗಳ ಸುದೀರ್ಘ ಕಡತ ಓದಿದರು. ಬಳಿಕ ಅದನ್ನು ನಡಾವಳಿಗೆ ಸೇರಿಸಿದ ಬಳಿಕ ಮಂಜುನಾಥ್ ಅವರು ಸುಮನಾದರು.
ಖಾತೆ ವಿಚಾರವಾಗಿ ಸದಸ್ಯರ ಪ್ರಶ್ನೆಗೆ ಆರ್‌ಒ ಅಭಿಲಾಷ್ ಅವರು ಮೈಕ್ ಸಹಾಯ ಪಡೆಯದೆ ಉತ್ತರ ನೀಡುತ್ತಿದ್ದರು. ಆಗ ಮಧ್ಯ ಪ್ರವೇಶಿಸಿದ ಅಧ್ಯಕ್ಷ ಚಂದ್ರೇಗೌಡ, ಮೈಕ್‌ನಲ್ಲಿ ಮಾತಾಡ್ರಿ ಎಂದರು. ಅದಕ್ಕೆ ಅಭಿಲಾಷ್, ಎಲ್ಲಾ ಹೇಳಿದಿನಿ ಸರ್ ಎಂದಾಗ, ಆಕ್ರೋಶಗೊಂಡ ಅವರು, ಏ ನಾನ್ ಹೇಳಿದ್ದು ಕೇಳು ನನಗೆ ಮರುತ್ತರ ಕೊಡಲು ನೀನು ಸುಪ್ರೀಮಾ ಎಂದಾಗ ಅಭಿಲಾಷ್ ಅವರು ಕ್ಷಮೆ ಕೋರಿದರು.
ಸದಸ್ಯೆ ಅಶ್ವಿನಿ ಮಹೇಶ್ ಅವರು ಮಾತನಾಡಿ, ಮಹಾವೀರ ವೃತ್ತದಲ್ಲಿ ಹೂವು, ಹಣ್ಣಿನ ಅಂಗಡಿಯಿಂದ ಸಮಸ್ಯೆಯಾಗುತ್ತಿದೆ. ಪಾದಚಾರಿ ಮಾರ್ಗ ಒತ್ತುವರಿ ಆಗಿರುವುದು ಮಾತ್ರವಲ್ಲದೆ ರಸ್ತೆಯನ್ನೂ ಆಕ್ರಮಿಸಿಕೊಂಡಿದ್ದಾರೆ. ವಾಹನ ಓಡಾಟಕ್ಕೆ ಅನುವು ಮಾಡಿಕೊಡಬೇಕು. ವ್ಯಾಪಾರಿಗಳ ಹಿತವನ್ನು ಕಾಪಾಡಬೇಕು. ಹಾಗಂತ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ ಅವರು ಶಾಪ ಹಾಕುವಂತೆ ಮಾಡಬೇಡಿ ಎಂದರು. ಆಗ ಮಾತನಾಡಿದ ಅಧ್ಯಕ್ಷರು, ಶಾಪ ಹಾಕ್ತಾರೆ ಅಂತ ಕುಳಿತರೆ ಕೆಲಸ ಮಾಡಲು ಆಗುವುದಿಲ್ಲ. ಒತ್ತುವರಿ ಜಾಗದಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸುತ್ತೇವೆಂದು ಸಭೆಗೆ ತಿಳಿಸಿದರು.
ಸದಸ್ಯ ಗಿರೀಶ್ ಚನ್ನವೀರಪ್ಪ ಅವರು ಮಾತನಾಡಿ, 33ನೇ ವಾರ್ಡ್‌ನಲ್ಲಿ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ತೆರವುಗೊಳಿಸದೆ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು ಹಾಸನಾಂಬ ಜಾತ್ರಾ ಮಹೋತ್ಸವ ವೇಳೆ ಬಿ.ಎಂ.ರಸ್ತೆಯಲ್ಲಿ ಒತ್ತುವರಿ ತೆರವಿಗೆ ಮುಂದಾಗಿದ್ದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡ ಕುಟುಂಬಗಳು ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡು ಹೇಗೋ ಜೀವನ ನಡೆಸುತ್ತಿವೆ.ಯಾರ ಕುಮಕ್ಕಿನಿಂದ ಒತ್ತುವರಿ ತೆರವುಗೊಳಿಸಿದಿರಿ. ಸ್ಥಳಕ್ಕೆ ಶಾಸಕರಾದ ಸ್ವರೂಪ್ ಮತ್ತು ಎಚ್.ಡಿ.ರೇವಣ್ಣ ಅವರು ಬಂದರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಏಕೆ ಎಂದು ಆಯುಕ್ತ ನರಸಿಂಹಮೂರ್ತಿ ವಿರುದ್ಧ ಮುಗಿಬಿದ್ದರು.
ಮಾನವೀಯತೆ ಇದ್ದಿದ್ದರೆ ಬಡಕುಟುಂಬಗಳನ್ನು ಬೀದಿಗೆ ತರುತ್ತಿರಲಿಲ್ಲ. ಇವತ್ತಿಗೂ ಅಲ್ಲಿನ ನಿವಾಸಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಅಧ್ಯಕ್ಷರೇ ಇದಕ್ಕೆಲ್ಲ ನೀವು ಉತ್ತರಿಸಬೇಕೆಂದು ಪಟ್ಟು ಹಿಡಿದರು. ಅಧ್ಯಕ್ಷ ಎಂ.ಚಂದ್ರೇಗೌಡ ಮಧ್ಯ ಪ್ರವೇಶಿಸಿ, ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಜಿಲ್ಲಾಧಿಕಾರಿ ಮೌಖಿಕ ಆದೇಶದ ಮೇರೆಗೆ ತೆರವುಗೊಳಿಸಿದ್ದೇವೆ ಎಂದಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದರು. ಆದರೆ ಗಿರೀಶ್ ಅವರು ಆಯುಕ್ತರ ವಿರುದ್ಧ ಏರುದನಿಯಲ್ಲಿ ಮಾತು ಮುಂದುವರಿಸಿದ ಪರಿಣಾಮ ಸಭೆಯನ್ನು ಗುರುವಾರಕ್ಕೆ ಮುಂದೂಡಿ ಅಧ್ಯಕ್ಷ ಚಂದ್ರೇಗೌಡ ಅಲ್ಲಿಂದ ನಿರ್ಗಮಿಸಿದರು.
ಮೌನಕ್ಕೆ ಶರಣಾಗಿದ್ದ ಮಹಿಳಾ ಸದಸ್ಯರು:
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಒಂದೇ ಒಂದು ವಿಷಯವಾರು ಚರ್ಚೆ ನಡೆಯಲಿಲ್ಲ. ಕೇವಲ ಮೈಕ್, ಒತ್ತುವರಿ ಹಾಗೂ ಆರೋಪ ಪ್ರತ್ಯಾರೋಪಗಳಲ್ಲಿನಲ್ಲಿ ಪುರುಷ ಸದಸ್ಯರು ನಿರತರಾಗಿದ್ದರು.ಮಹಿಳಾ ಸದಸ್ಯರು ಮೌನಕ್ಕೆ ಶರಣಾಗಿ ಕುಳಿತಿದ್ದರು. ನಂತರ ಸಭೆ ಮುಗಿದ ಮೇಲೆ ಮಹಿಳಾ ಸದಸ್ಯರು ನಾವು ಪ್ರತಿ ಸಭೆಯಲ್ಲಿಯೂ ಕೂಡ ಇವರ ಗದ್ದಲ ಆರೋಪಗಳನ್ನೇ ಕೇಳಿಕೊಂಡು ಹೋಗಬೇಕಾಗಿದೆ. ನಮಗೆ ನಮ್ಮ ವಾರ್ಡ್‌ನ ಯಾವುದೇ ಸಮಸ್ಯೆಗಳನ್ನು ಕೇಳಲು ಆಗುವುದಿಲ್ಲ, ಇಂತಹ ಸಭೆಗೆ ನಾವು ಏಕೆ ಬರಬೇಕು ಎಂದು ಸಭೆ ಮುಗಿದ ನಂತರ ನಗರಸಭೆ ಆಭರಣದಲ್ಲಿ ಅಸಮಧಾನ ಹೊರಹಾಕುತ್ತಿದ್ದರು.