ಬಾಗಲಕೋಟೆ: ಮನೆಯ ಮದ್ದುನ್ನು ಬಳಸಿ ಆರೋಗ್ಯಕರವಾಗಿರುವಂತಹ ಮಾಹಿತಿಯನ್ನು ನೀಡುವುದಕ್ಕೆ ಉಚಿತ ಕನ್ನಡ ಎಂಎಂಎಚ್ ಆ್ಯಪ್ ತಯಾರಿಸಲಾಗಿದೆ ಎಂದು ಇಳಕಲ್ಲ ಪಟ್ಟಣದ ಎಲುಬು ಮತ್ತು ಕೀಲು ತಜ್ಞ ಡಾ.ಮಹಾಂತೇಶ ಅಕ್ಕಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೮ ರಿಂದ ೧೦ ಜನರು ಸೇರಿಕೊಂಡು ಎಂಎಮ್‌ಎಚ್ ಆ್ಯಪ್ ಕಳೆದ ವರ್ಷ ನವ್ಹಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಜನರು ಈ ಆ್ಯಪ್‌ನ್ನು ಬಳಕೆ ಮಾಡುತ್ತಿದ್ದಾರೆ ಎಂದರು.
ಡಾ.ಅನಿತಾ ಅಕ್ಕಿ ಮಾತನಾಡಿ, ಸಾಮಾನ್ಯ ರೋಗಗಳಿಗೆ, ಚಿಕ್ಕಪುಟ್ಟ ರೋಗಗಳಿಗೆ ಮನೆಯಲ್ಲಿ ಕುಳಿತು ವೈದ್ಯರ ಸಲಹೆ ಹಾಗೂ ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಆ್ಯಪ್ ಮೂಲಕ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಸಾಮಾನ್ಯ ಜನರಿಗೆ ಈ ಆ್ಯಪ ಉಪಯುಕ್ತವಾಗಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಹೊರತರಲಾಗಿದೆ. ಇದರಲ್ಲಿ ನುರಿತ ಹಾಗೂ ಸೂಪರ್ ಸ್ಪೇಷಲಿಸ್ಟ್ ವೈದ್ಯರು ಕೂಡ ಇದ್ದಾರೆ ಎಂದರು.
ಆಸ್ಪತ್ರೆಗೆ ಬರದೇ ಮನೆಯಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ವಿಧಾನವನ್ನು ತಿಳಿಸುವ ವಿಡಿಯೋ ಸಮೇತ ಅಪ್‌ಲೋಡ್ ಮಾಡಲಾಗಿದೆ. ಮಧುಮೇಹ, ಗಂರ್ಭೀಣಿಯರಿಗೆ ಹಾಗೂ ಜನ ಸಾಮಾನ್ಯರಿಗೆ ಮಾಹಿತಿ ನೀಡಲು ಮತ್ತು ಯಾವುದೇ ಗೊಂದಲವಿದ್ದರು ಉತ್ತರಿಸಲು ಆ್ಯಪ್ ಮೂಲಕ ಮಾಹಿತಿ ನೀಡಲಾಗುತ್ತದೆ. ಯಾವುದೇ ಆಸ್ಪತ್ರೆಗೆ ಇದು ಸೀಮಿತವಾಗಿಲ್ಲ. ಆಸಕ್ತ ವೈದ್ಯರು ಈ ಆ್ಯಪ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದಾಗಿದೆ. ೪೦ ಸಾವಿರಕ್ಕೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದು ರಾಜ್ಯಾದ್ಯಂತ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಸುಮಾರು ೫೦ಕ್ಕೂ ಹೆಚ್ಚು ವೈದ್ಯರು ತಮ್ಮ ಅಭಿಪ್ರಾಯವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ ಎಂದು ಹೇಳಿದರು.