ಯಲ್ಲಾಪುರ: ಕಾರ್ಯಕರ್ತರನ್ನು ಗುರುತಿಸಿ, ಪದವಿ ನೀಡುವ ಪಕ್ಷ ಬಿಜೆಪಿ ಮಾತ್ರ ಎಂಬುದನ್ನು ಶಾಂತಾರಾಮ ಸಿದ್ದಿ ಅಂಥವರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡುವ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೊದಲು ಹಣಬಲ, ರಾಜಕೀಯ ಪ್ರಭಾವ ಇದ್ದವರಿಗೆ ಮಾತ್ರ ಸ್ಥಾನಮಾನ ದೊರೆಯುವ ವಾತಾವರಣ ಇತ್ತು. 2014ರಲ್ಲಿ ಮೋದಿ ಸರ್ಕಾರ ಬಂದ ನಂತರ ಇಂತಹ ಪ್ರತಿಭಾವಂತರನ್ನು, ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ನೀಡಲಾಗುತ್ತಿದೆ. ಸಮಾಜಮುಖಿ ಕಾರ್ಯಗಳ ಜತೆಗೆ, ಪಕ್ಷದ ಸಂಘಟನೆಯಲ್ಲೂ ಇನ್ನಷ್ಟು ತೊಡಗಿಸಿಕೊಂಡು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು.
ಸನ್ಮಾನ: ಈ ಸಂದರ್ಭದಲ್ಲಿ ವಿಧಾನ ಪರಿಷತ್ ನೂತನ ಸದಸ್ಯ ಶಾಂತಾರಾಮ ಸಿದ್ದಿ ಅವರನ್ನು ಪಕ್ಷದ ವತಿಯಿಂದ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಅವರು, ನನ್ನ ಸಾಮಾಜಿಕ ಸೇವೆ ಗುರುತಿಸಿ ಸರ್ಕಾರ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಿರುವುದು ಸಂತಸ ನೀಡುವುದಕ್ಕಿಂತ ಜವಾಬ್ದಾರಿ ಹೆಚ್ಚಿಸಿದೆ. ವನವಾಸಿ ಸಮುದಾಯಗಳ ಜನರ ಕಷ್ಟಗಳನ್ನು ಅರಿತು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಬಂದವನು ನಾನು. ಸರ್ಕಾರದ ಚೌಕಟ್ಟಿನ ಒಳಗೆ ಕೆಲಸ ಮಾಡುವ ಈ ಕ್ಷೇತ್ರ ನನಗೆ ಹೊಸದು. ಹಿರಿಯರು, ಹಿತೈಷಿಗಳ ಮಾರ್ಗದರ್ಶನ, ಸಹಕಾರದಲ್ಲಿ ಸನ್ಮಾರ್ಗದಲ್ಲಿ ನಡೆಯುತ್ತ ಸತ್ಕಾರ್ಯಗಳನ್ನು ಮಾಡುವ ಸಂಕಲ್ಪ ಹೊಂದಿದ್ದೇನೆ. ಎಲ್ಲಾ ಸಮುದಾಯಗಳ ಸಮಗ್ರ ಅಭಿವೃದ್ಧಿ ಸರ್ಕಾರದ ಹಾಗೂ ನನ್ನ ಆಶಯ. ಆದರೆ, ಬುಡಕಟ್ಟು ಸಮುದಾಯದಿಂದ ಬಂದ ನಾನು ವನವಾಸಿ ಸಮುದಾಯಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು. ರಾಜ್ಯ ವಕ್ತಾರ ಪ್ರಮೋದ ಹೆಗಡೆ, ಜಿಲ್ಲಾ ಉಪಾಧ್ಯಕ್ಷರಾದ ಉಮೇಶ ಭಾಗ್ವತ, ಉಮೇಶ ಬಂಕಾಪುರ, ನಾಗರಾಜ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಸ್. ಹೆಗಡೆ, ಚಂದ್ರು ಎಸಳೆ, ಗೋವಿಂದ ನಾಯ್ಕ, ಪ್ರಮುಖರಾದ ರೇಖಾ ಹೆಗಡೆ, ಮಾಸ್ತಿ ಗೌಡ, ಶ್ರುತಿ ಹೆಗಡೆ ಇತರರಿದ್ದರು.