ಬೀದರ್: ಸಾಮಾಜಿಕ ಸುಧಾರಣೆ ಕ್ರಾಂತಿಗೆ ಕಾರಣರಾದ ನಾರಾಯಣ ಗುರುಗಳು ಯಾವುದೇ ಒಂದು ಜಾತಿ, ಧರ್ಮದ ಗುರುಗಳಲ್ಲ. ಲೋಕಗುರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಣ್ಣಿಸಿದರು.
ನಗರದಲ್ಲಿ ಜಿಲ್ಲಾ ಈಡಿಗ ಸಮಾಜ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ನಾರಾಯಣ ಗುರು ಹೇಳಿದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ತತ್ವವನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಬಸವಣ್ಣನವರ ತತ್ವಗಳಿಗೆ 19ನೇ ಶತಮಾನದಲ್ಲಿ ಮರುಜೀವ ನೀಡಿದವರು ನಾರಾಯಣಗುರು. ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದರು. ತಮ್ಮ ಕಾಲದಲ್ಲಿ ಕೆಳಜಾತಿಯವರ ಮೇಲೆ ಆಗುತ್ತಿದ್ದ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ವಿಸಿದ್ದ ನಿಬಂಧನೆಗಳನ್ನು ಅಹಿಂಸಾತ್ಮಕವಾಗಿ ವಿರೋಧಿಸಿ ಮಾನವ ಕುಲ ಒಂದೇ ಎಂಬ ಸಿದ್ಧಾಂತವನ್ನು ಸಾರಿದ್ದರು ಎಂದು ಹೇಳಿದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿ, ಮಹನೀಯರ ಜಯಂತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ನಾರಾಯಣಗುರು ಮೌನಕ್ರಾಂತಿ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಸುಧಾರಣೆಗೆ ಶ್ರಮಿಸಿದ್ದಾರೆ ಎಂದರು.
ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ, ಶ್ರೀ ವಿಖ್ಯಾತಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಡಾ.ಸಿದ್ದು ಪಾಟೀಲ್, ಬಾಲರಾಜ ಗುತ್ತೇದಾರ್ ಮಾತನಾಡಿದರು.
ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಡಾ.ರಾಜಶೇಖರ ಸೇಡಂಕರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಮುಖಂಡರಾದ ರಾಜೇಶ ಗುತ್ತೇದಾರ್, ವಿನಯ ಗುತ್ತೇದಾರ್, ಅಶೋಕ ಚವ್ಹಾಣ್, ಬಸವರಾಜ ಮಾಳಗೆ, ಮನ್ನಾನ್ ಸೇಠ್, ನಾರಾಯಣ ಗಣೇಶ, ಶಂಕರರಾವ್ ನೇಳಗೆ, ಸಂಗಯ್ಯ ಸುಲ್ತಾನಪುರ, ಸಿ.ಕೆ. ಗೌಡ, ಅಶೋಕ ಗೌಡ, ಶ್ರೀಮಂತ ಗೌಡ, ಸಂತೋಷಿ ಗೌಡ ಇತರರಿದ್ದರು.
ಶಿವಕುಮಾರ ತೇಲಂಗ ಸ್ವಾಗತಿಸಿದರು. ವಿನಾಯಕ ಕುಲಕರ್ಣಿ ನಿರೂಪಣೆ ಮಾಡಿದರು. ಸುಭಾಷ ಜಂಬಗಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಣೇಶ ಮೈದಾನದಿಂದ ಸಾಯಿ ಸ್ಕೂಲ್ ಆವರಣವರೆಗೆ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
ನಿಗಮಕ್ಕೆ ಅಗತ್ಯ ಅನುದಾನ
ಆರ್ಯ ಈಡಿಗ ಸಮಾಜ ಅಭಿವೃದ್ಧಿಗಾಗಿ ಸ್ಥಾಪಿಸಿರುವ ನಿಗಮಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಭರವಸೆ ನೀಡಿದರು. ಈಡಿಗ ಸಮಾಜದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದಲೇ ಉಜ್ವಲ ಭವಿಷ್ಯ ತತ್ವ ಅರಿಯಬೇಕು ಎಂದರು.