ಜಿಲ್ಲೆ

ಸಾಮಾಜಿಕ ಸುಧಾರಣೆ ತಂದ ಕುವೆಂಪು ಸಾಹಿತ್ಯ

ಚಾಮರಾಜನಗರ: ಇಡೀ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಪರಿಕಲ್ಪನೆಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮೈಸೂರು ರಂಗಾಯಣದ ಅರಸೀಕೆರೆ ಯೋಗಾನಂದ ಹೇಳಿದರು.

ನಗರದ ರೋಟರಿ ಭವನದಲ್ಲಿ ಎದ್ದೇಳು ಕರ್ನಾಟಕ, ಪುನರ್ಜಿತ್ ನಾಗವಳ್ಳಿ, ಶಾಂತಲಾ ಕಲಾವಿದರು, ರೋಟರಿ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕುವೆಂಪು ಜನ್ಮ ದಿನಾಚರಣೆ, ವಿಶ್ವಮಾನವ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುವೆಂಪು ಅವರು ಶ್ರೇಷ್ಠ ಕವಿ. ಅವರು ತಮ್ಮ ಆಲೋಚನೆಗಳನ್ನು ಸಾಹಿತ್ಯ ಹಾಗೂ ಕೃತಿಗಳ ಮೂಲಕ ಸಮಾಜಕ್ಕೆ ನೀಡಿದ್ದು, ಅವರ ಈ ಬರಹಗಳು ಹಲವಾರು ಸಾಮಾಜಿಕ ಸುಧಾರಣೆ ತಂದಿದೆ. ದುಂದುವೆಚ್ಚ ಮಾಡದೆ ಮದುವೆ ನಡೆಸುವ ಸಲುವಾಗಿ ಪ್ರಪಂಚಕ್ಕೆ ಮಂತ್ರ ಮಾಂಗಲ್ಯವನ್ನು ಅವರು ಪರಿಚಯಿಸಿದ್ದಾರೆ. ಕುವೆಂಪು ರಚಿಸಿದ ನಾಡಗೀತೆಯನ್ನು ದಿನನಿತ್ಯ ಹಾಡುವ ಮೂಲಕ ಪ್ರತಿದಿನ ಅವರನ್ನು ನಾವು ನೆನೆಯುತ್ತಿದ್ದೇವೆ. ಸಾಹಿತ್ಯ ಲೋಕದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕರುನಾಡಿಗೆ ತಂದುಕೊಟ್ಟ ಶ್ರೇಷ್ಠ ಕವಿಯಾಗಿದ್ದಾರೆ ಎಂದರು.

ಶಾಂತಲಾ ಕಲಾವಿದರ ಸಂಘದ ಕೆ.ವೆಂಕಟರಾಜು ಮಾತನಾಡಿ, ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠ ಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೂಟ್ಟ ಹಿರಿಮೆಯನ್ನು ಹೊಂದಿದ ಇವರ ಶ್ರೀ ರಾಮಾಯಣದರ್ಶನಂ ಮಹಾಕಾವ್ಯ ಸಂಸ್ಕೃತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ ಎಂದರು.

ಕುವೆಂಪು ಬಹಳ ದೊಡ್ಡ ಕವಿಯಾಗಿದ್ದು, ಅಂದಿನ ದಿನಗಳಲ್ಲಿ ಸಾಹಿತ್ಯ ಬರೆಯುತ್ತಿದ್ದವರು ಮೇಲ್ಜಾತಿಯವರು ಶೇ.90 ಇದ್ದರು. ತಳ ಸಮುದಾದವರು ವಿರಳ ಇದ್ದರು ಅಂತಹ ಸಂದರ್ಭದಲ್ಲೂ ಕೂಡ ಕವಿಯಾಗಿ ಬೆಳಕಿಗೆ ಬಂದದ್ದು ದೊಡ್ಡ ಸಾಧನೆಯಾಗಿದೆ ಎಂದರು.

ಮೆರವಣಿಗೆ: ಕುವೆಂಪು ಅವರ ಸಂದೇಶಗಳುಳ್ಳ ಭಿತ್ತಿಚಿತ್ರಗಳನ್ನು ಹಿಡಿದು ನಗರದ ಪ್ರವಾಸಿಮಂದಿರದಿಂದ ಮೆರವಣಿಗೆ ಹೊರಟು ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ರೋಟರಿ ಭವನದವರಗೆ ಮೆರವಣಿಗೆ ನಡೆಸಲಾಯಿತು. ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು, ಪುನರ್ಜಿತ್ ಸಂಸ್ಥೆಯ ಆಡಳಿತಾಧಿಕಾರಿ ವೀರಭದ್ರನಾಯಕ ಇತರರು ಹಾಜರಿದ್ದರು.