ಮೈಸೂರು: ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಆರ್ಥಿಕ ಸಮಾನತೆ ದೊರೆತಾಗ ಮಾತ್ರ ಅಂಬೇಡ್ಕರ್ ಕಂಡ ಕನಸು ನನಸಾಗಲು ಸಾಧ್ಯವಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಾಮಾಜಿಕ ಸಮಾನತೆ ದೊರೆಯದಿರುವುದು ಬೇಸರದ ಸಂಗತಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ವಿಜಯನಗರ ಮೂರನೇ ಹಂತದ ಉದ್ಯಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ 21ನೇ ಶತಮಾನದಲ್ಲಿ ಜಗತ್ತಿನ ಮಹಾನ್ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವರಂತಹ ವಿಶ್ವಜ್ಞಾನಿ ಬೇರೊಬ್ಬರು ಇಲ್ಲ. ಅದಕ್ಕಾಗಿಯೇ ಇಂದು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲು ಕಾರಣವಾಗಿದೆ ಎಂದರು.
ಅಂಬೇಡ್ಕರ್ ಅವರು ಬ್ರಾಹ್ಮಣರ ವಿರೋಧಿ ಎನ್ನುವ ಮಾತನ್ನು ಹೇಳುವುದು ಸುಳ್ಳು. ಅವರೆಂದಿಗೂ ಬ್ರಾಹ್ಮಣರನ್ನು ವಿರೋಧಿಸಿಲ್ಲ. ಬ್ರಾಹ್ಮಣತ್ವವನ್ನು ವಿರೋಧಿಸಿದ್ದೇನೆ ಎಂದು ಹೇಳಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ನರೇಂದ್ರಮೋದಿ ಅವರು ಸಂವಿಧಾನ ಇಟ್ಟು ಪೂಜೆ ಮಾಡಿದಲ್ಲದೆ, ನಮಸ್ಕಾರ ಮಾಡಿ ಸಂಸತ್ ಪ್ರವೇಶ ಮಾಡಿದ್ದರು. ಅಂಬೇಡ್ಕರ್ ಜಯಂತಿ ದಿನದಂದು ಕೇಂದ್ರ ಸರ್ಕಾರವು ಸರ್ಕಾರಿ ರಜೆಯನ್ನು ಘೋಷಣೆ ಮಾಡಿ ಐತಿಹಾಸಿಕ ತೀರ್ಮಾನ ಮಾಡಿದೆ. ರಾಜ್ಯದಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರವು ಜಾರಿಗೆ ತಂದಿತು ಎಂದುನುಡಿದರು.
ಸಮಾಜದ ಕಟ್ಟಕಡೆಯ ಶೋಷಿತ, ದಮನಿತ, ಹಿಂದುಳಿದ, ದುರ್ಬಲ ವರ್ಗದವರಿಗೆ ಧ್ವನಿ ಕೊಟ್ಟವರು. ಅನ್ಯಾಯ, ನೋವು ಮಾಡಿದ್ದಾರೆಂದು ಎಲ್ಲಿಯೂ ಬರೆದಿಲ್ಲ. ಯಾರಿಗೂ ಹೇಳಿಲ್ಲ. ಅಂಬೇಡ್ಕರ್‌ಗೆ ಮಾತ್ರ ಕೋಪ ಬರಲಿಲ್ಲ.
ಯಾವುದೇ ವರ್ಗ, ಜನರ ಮೇಲೆ ಕೋಪ ಇರಲಿಲ್ಲ. ಸಮಾನತೆ, ಸುಂದರ ಬದುಕು ಕಟ್ಟಿಕೊಳ್ಳಬೇಕೆಂಬ ಕಾರಣಕ್ಕಾಗಿ ಶಿಕ್ಷಣ ಪಡೆಯುವಂತೆ ಮಾಡಲು ಮೊದಲ ಆದ್ಯತೆ ನೀಡಿದರು. ಅಂತಹ ಮಹಾನ್ ವ್ಯಕ್ತಿ ನೀಡಿರುವ ಸಂದೇಶ ಪಾಲಿಸಬೇಕು ಎಂದು ಸಲಹೆ ನೀಡಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎನ್.ಎಂ.ತಳವಾರ್ ಅವರು ಅಂಬೇಡ್ಕರ್ ಜೀವನ ಕುರಿತು ಮುಖ್ಯಭಾಷಣ ಮಾಡಿದರು. ಮುಖಂಡರಾದ ಮಂಜಪ್ಪ, ರವಿಕುಮಾರ್, ಮಂಜುನಾಥ್, ಅಭಿಷೇಕ್, ಪರಶಿವಮೂರ್ತಿ, ಚೈತನ್ಯಕುಮಾರ್, ಸುವರ್ಣರೆಡ್ಡಿ, ತಂಗಂ, ವಿಜಯಕುಮಾರಿ, ನಿವೃತ್ತ ಮುಡಾ ಎಸ್‌ಇ ಶಂಕರ್ ಇದ್ದರು.