ಚಿತ್ರದುರ್ಗ: ರಾಜ್ಯಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸೆ.22ರಿಂದ ಆರಂಭವಾಗಲಿದ್ದು, ಇದರ ಪೂರ್ವಭಾವಿ ಯಾಗಿ ಸಮೀಕ್ಷೆಗೆ ಅಗತ್ಯ ದಾಖಲೆಗಳ ಸಿದ್ಧತೆಗೆ ಸೆ.10ರಿಂದ 19ರವರೆಗೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.
ಸಮೀಕ್ಷೆ ಕುರಿತಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದದ ಬಳಿಕ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರಾಜ್ಯದ ಎಲ್ಲ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿದು ನೀತಿ ನಿರೂಪಣೆಗೆ ಸಮೀಕ್ಷೆ ಆಧಾರವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಸಮೀಕ್ಷೆ ಅನುಷ್ಠಾನ ಎಲ್ಲರ ಜವಾಬ್ದಾರಿ. ಶಿಕ್ಷಕರು 22ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಸಲಿದ್ದಾರೆ. ರಾಜ್ಯದ 2 ಕೋಟಿಗೂ ಅಧಿಕ ಮನೆಗಳ ಸಮೀಕ್ಷೆ ಕೈಗೊಳ್ಳಬೇಕಿದೆ. ಗಣತಿದಾರರಿಗೆ ಏನೆಲ್ಲ ಮಾಹಿತಿ, ದಾಖಲೆಗಳ ಸಿದ್ಧತೆ ಕುರಿತಂತೆ ಎನ್‌ಎಸ್‌ಎಸ್ ಸ್ವಯಂ ಸೇವಕ ವಿದ್ಯಾರ್ಥಿಗಳು ಅರಿವು ಮೂಡಿಸಬೇಕು.
ಜಿಲ್ಲೆಯ ಎಲ್ಲ ಕಾಲೇಜುಗಳ ಎನ್‌ಎಸ್‌ಎಸ್ ಘಟಕಗಳ ವಿದ್ಯಾರ್ಥಿಗಳು ಹಾಗೂ ಇತರೆ ವಿದ್ಯಾರ್ಥಿಗಳು ಕೂಡ ಸ್ವಯಂ ಪ್ರೇರಿತವಾಗಿ ಅರಿವು ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಬಹುದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸಮನ್ವಯ ರೂಪಿಸಬೇಕೆಂದು ಸಚಿವರು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ಕುಟುಂಬದ ಸಮೀಕ್ಷೆ ನಡೆಸಬೇಕು. ಅಲೆಮಾರಿ, ಅರೆ ಅಲೆಮಾರಿ, ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂ ಬಗಳನ್ನೂ ಸಮೀಕ್ಷೆ ವ್ಯಾಪ್ತಿಗೆ ತರಬೇಕು. ಯಾವೊಂದು ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯಬಾರದು. ಅಂದಾಜು 60 ಪ್ರಶ್ನಾವಳಿಗಳಿವೆ. ಪಡಿತರ ಚೀಟಿ, ಆಧಾರ್ ಸಂಖ್ಯೆ ಆಧರಿಸಿ ಸಮೀಕ್ಷೆ ನಡೆಯಲಿದೆ.
ಸಮೀಕ್ಷಾದಾರರು ಭೇಟಿ ನೀಡಿದಾಗ ಪಡಿತರ ಚೀಟಿ, ಆಧಾರ್ ಕಾರ್ಡ್, ಅಂಗವಿಕಲರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಸಿದ್ಧವಾಗಿಟ್ಟುಕೊಂಡಿರಬೇಕು. ಇದರಿಂದ ಸಮೀಕ್ಷೆ ವೇಗವಾಗಿ ನಡೆಸಬಹುದಾಗಿದೆ. ಕುಟುಂಬದ ಎಲ್ಲ ಸದಸ್ಯರ ಆಧಾರ್‌ಕಾರ್ಡ್‌ಗಳು ಯಾವೆಲ್ಲ ಮೊಬೈಲ್ ನಂಬರ್‌ಗಳಿಗೆ ಲಿಂಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸಮೀ ಕ್ಷೆಗೆ ಆಧಾರ್‌ಕಾರ್ಡ್ ಕಡ್ಡಾಯ.
ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಸಮೀಪದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ, ನೋಂದಣಿ ಸಂಖ್ಯೆ ಪಡೆಯಬೇಕು. ಆಧಾರ್ ಕಾರ್ಡ್ ಇದ್ದು, ಲಿಂಕ್ ಆಗಿರುವ ಮೊಬೈಲ್‌ಪೋನ್ ನಂಬರ್ ಇಲ್ಲದಿದ್ದರೆ ಹತ್ತಿರದ ಆಧಾರ್ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಿ, ಪ್ರಸ್ತುತ ವಿರುವ ಮೊಬೈಲ್ ನಂಬರ್‌ಗೆ ಲಿಂಕ್ ಮಾಡಿಸಿಕೊಳ್ಳಲು ಜನರಿಗೆ ವಿದ್ಯಾರ್ಥಿಗಳು ತಿಳಿಸಬೇಕೆಂದು ಡಿಸಿ ಹೇಳಿದರು.
ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳು, ಎನ್‌ಎಸ್‌ಎಸ್ ಘಟಕಗಳು, ಲಭ್ಯವಿರುವ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ತರಬೇತಿ ಕೂಡ ನೀಡಲಾಗುವುದು. ವಿದ್ಯಾರ್ಥಿನಿಯರನ್ನು ನಗರ, ಪಟ್ಟಣ ಕೇಂದ್ರಗಳಲ್ಲಿ ನಿಯೋಜಿಸಬೇಕು. ಜಾಗೃತಿ ಕಾರ್ಯದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರಮಾಣ ಪತ್ರ ವಿತರಿಸಲಿದೆ ಎಂದು ಡಿಸಿ ವಿವರಿಸಿದರು.
ಜಿಪಂ ಸಿಇಒ ಡಾ.ಎಸ್. ಆಕಾಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಬಿಸಿಎಂ ಜಿಲ್ಲಾ ಅಧಿಕಾರಿ ಪುಷ್ಪಲತಾ, ಡಿಡಿಪಿಐ ಮಂಜುನಾಥ್ ಮತ್ತಿತರ ಅಧಿಕಾರಿಗಳಿದ್ದರು.