ಚಿತ್ರದುರ್ಗ: ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಕಾರ್ಯ ಕೈಗೊಂಡು ಸಿಎಂ ಸಿದ್ದರಾಮಯ್ಯ ಬದ್ಧತೆ ತೋರಿದ್ದು, ಇದು ಪ್ರಗತಿಗೆ ಉತ್ತಮ ಮಾರ್ಗವಾಗಲಿದೆ. ಆದ್ದರಿಂದ ಯಾರೊಬ್ಬರೂ ಅಪಸ್ವರ ಎತ್ತದೆ ಪಾಲ್ಗೊಳ್ಳಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಮನವಿ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ರಾಜ್ಯ ಅಭಿವೃದ್ಧಿ ಹೊಂದಲು ಅಲ್ಲಿನ ಜನರ ಸ್ಥಿತಿಗತಿ ಅರಿತುಕೊಳ್ಳಬೇಕು. ಯಾವ ಸಮುದಾಯ ಎಷ್ಟು ಸಂಖ್ಯೆಯಲ್ಲಿದೆ. ಅವರ ಹಿಂದುಳಿಯುವಿಕೆ ಸೇರಿ ವಿವಿಧ ಅಂಶಗಳ ಮಾಹಿತಿ ಅಗತ್ಯ. ಆಗ ಮಾತ್ರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸಾಧ್ಯ ಎಂದರು.
ರಾಜ್ಯದಲ್ಲಿ ಮಾದಿಗರ ಸಂಖ್ಯೆ ಕುಗ್ಗಿಸುವ ಕುತಂತ್ರ ನಡೆಯುತ್ತಿದೆ. ಹೀಗಾಗಿ ನಾವೆಲ್ಲ ಹಟ್ಟಿ, ಕಾಲನಿಗಳಲ್ಲಿ ಜಾಗೃತಿ ಮೂಡಿಸಬೇಕು. ನಮ್ಮದು ಸೇರಿ ಎಲ್ಲ ಸಮುದಾಯಗಳ ಅರ್ಹರಿಗೆ ವಸತಿ, ಮಕ್ಕಳಿಗೆ ಶಿಕ್ಷಣ, ಗಂಗಕಲ್ಯಾಣ ಯೋಜನೆಯಡಿ ಕೊಳವೆಬಾವಿ, ಸಾಲ ಸೌಲಭ್ಯ ಒಳಗೊಂಡು ಇನ್ನಿತರೆ ಸವಲತ್ತು ಪಡೆಯಲು ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಎಚ್.ಸಿ. ಮಹಾದೇವಪ್ಪ ಸೇರಿ ವಿವಿಧ ಸಚಿವರ ಮನೆಗಳಿಗೆ ಹೋರಾಟಗಾರರು ಮುತ್ತಿಗೆ ಹಾಕುವ ನಡೆ ಸರಿಯಲ್ಲ. ಸರ್ಕಾರದ ಬಳಿ ಮಾಹಿತಿ ಇದ್ದಾಗ ಮಾತ್ರ ಹಿಂದುಳಿದ ಜಾತಿ ಜನರನ್ನು ಮುಖ್ಯವಾಹಿನಿಗೆ ತರಲು ಸಾಧ್ಯ. ಆದ್ದರಿಂದ ಸಮೀಕ್ಷೆ ಕಾರ್ಯ ಸ್ವಾಗತಾರ್ಹ ಎಂದು ತಿಳಿಸಿದರು.
ಒಳಮೀಸಲಾತಿ ಜಾರಿ ವಿಷಯದಲ್ಲಿ ಎಕೆ, ಎಎ, ಎಡಿ ಜಾತಿ ಸೂಚಕ ವರ್ಗದಲ್ಲಿ ಗುರುತಿಸಿಕೊಂಡವರು ‘ಎ’ ಅಥವಾ ‘ಬಿ’ ಗುಂಪಿನಲ್ಲಿ ಗುರುತಿಸಿಕೊಳ್ಳಲು ಕಡ್ಡಾಯವಾಗಿ ತಮ್ಮ ಮೂಲ ಜಾತಿ ಘೋಷಣೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ, ಅವರೆಲ್ಲ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ಎಚ್ಚರಿಸಿದರು.
ಕಾಡುಗೊಲ್ಲರು ಜಾಗೃತಗೊಂಡು ಜಾತಿ ಕಾಲಂನಲ್ಲಿ ಕಾಡುಗೊಲ್ಲ ಎಂದೇ ಬರೆಸುವಂತೆ ತಮ್ಮ ಸಮುದಾಯದವರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇದೇ ರೀತಿ ಎಲ್ಲ ಸಮಾಜದವರೂ ಜಾಗೃತರಾಗಬೇಕು. ಸ್ವ-ಇಚ್ಛೆಯಿಂದ ಸಮೀಕ್ಷೆಯಲ್ಲಿ ಪಾಲ್ಗೊಂಡರೆ ಮುಂದಿನ ಪೀಳಿಗೆಗೆ ಸರ್ಕಾರಿ ಸೌಲಭ್ಯಗಳು ದೊರೆಯಲಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಗೀತಾ ನಂದಿನಿಗೌಡ, ಮಾಜಿ ಸದಸ್ಯ ಆರ್. ನರಸಿಂಹರಾಜು, ಲಿಡ್ಕರ್ ಮಾಜಿ ಅಧ್ಯಕ್ಷ ಓ. ಶಂಕರ್, ವಕೀಲರಾದ ಶರಣಪ್ಪ, ಸಿ.ಎಸ್. ರವೀಂದ್ರ, ಮುಖಂಡರಾದ ಅನಿಲ್ ಕೋಟಿ, ಚೇತನ್ ಎಚ್. ಬೋರೇನಹಳ್ಳಿ, ಪ್ರಸನ್ನ, ಜಯಣ್ಣ ಇತರರಿದ್ದರು.