ಜಿಲ್ಲೆ

ಸಾಮಾಜಿಕ ನ್ಯಾಯದ ಹರಿಕಾರ ಅರಸು

ಕೆ.ಆರ್.ಪೇಟೆ: ಹಿಂದುಳಿದವರು, ಶೋಷಿತರು ಹಾಗೂ ತುಳಿತಕ್ಕೆ ಒಳಗಾದ ಜನರಿಗೆ ಶಾಶ್ವತವಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಉಳುವವನಿಗೆ ಭೂಮಿಯ ಒಡೆತನದ ಹಕ್ಕನ್ನು ನೀಡಿದ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂಮಿಯ ಒಡೆತನದ ಹಕ್ಕನ್ನು ಉಳುವವರಿಗೆ ನೀಡುವಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಸಾವಿರಾರು ಕುಟುಂಬಗಳು ನೆಮ್ಮದಿ ಜೀವನ ನಡೆಸಲು ಕಾರಣರಾದ ಅರಸು ಕರ್ನಾಟಕ ರಾಜ್ಯದ ಭಾಗ್ಯವಿಧಾತ. ಬಡ ಗೇಣಿದಾರರ ದಶಕಗಳ ಹೋರಾಟಕ್ಕೆ ಮುಕ್ತಿ ನೀಡಿ ಜೀತ ಪದ್ಧತಿಯನ್ನು ಕೊನೆಗಾಣಿಸುವಂತಹ ದಿಟ್ಟ ನಿರ್ಧಾರ ಕೈಗೊಂಡ ಅರಸು ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ದೇಶವೇ ಮೆಚ್ಚುವಂತೆ ದಕ್ಷ ಆಡಳಿತ ನೀಡಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ ಎಂದು ಬಣ್ಣಿಸಿದರು.

ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೌಢ್ಯಗಳ ವಿರುದ್ಧ ಹೋರಾಟ ನಡೆಸಿದ್ದ ಅವರು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಆಶಯದಂತೆ ಕಾಯಕಯೋಗಿ ಬಸವಣ್ಣನವರ ತತ್ವ ಸಂದೇಶಗಳನ್ನು ಅನುಷ್ಠಾನಗೊಳಿಸಿದರು. ಹಿಂದುಳಿದ ವರ್ಗಗಳ ಜನರಿಗೆ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಶಕ್ತಿ ತುಂಬಿದ್ದರು ಎಂದು ಸ್ಮರಿಸಿದರು.

ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ವೆಂಕಟೇಶ್, ನಿಲಯಪಾಲಕ ಜಗದೀಶ್, ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿ ಇದ್ದರು.