ಬಳ್ಳಾರಿ : ಮಾಜಿ ಸಿಎಂ ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯದ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ನಗರದ ವಾಲ್ಮೀಕಿ ಭವನನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯದಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ವಿದ್ಯಾರ್ಥಿಗಳು ಹಾಸ್ಟೆಲ್‌ಗಳ ಸದುಪಯೋಗಪಡೆದುಕೊಂಡು, ತಮ್ಮ ಅಮೂಲ್ಯ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಯುವ ಸಮೂಹಕ್ಕೆ ಕಿವಿಮಾತು ಹೇಳಿದರು.
ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದನ್ನು ಪ್ರತಿಪಾದಿಸಿದರು. ರೈತಾಪಿ ಜನರ ನೋವು-ನಲಿವುಗಳನ್ನು ಬಲ್ಲವರಾಗಿದ್ದರು. ಕೃಷಿ ಕೆಲಸ ಮಾಡುತ್ತಿದ್ದ ಅವರು ರೈತರ ಕಷ್ಟಗಳನ್ನು ಮನಗಂಡಿದ್ದರು. ಹಾಗಾಗಿ ಭೂ ಸುಧಾರಣೆ ವಿಷಯದಲ್ಲಿ ಉಳುವವನೆ ಭೂಮಿ ಒಡೆಯ ಯೋಜನೆ ಜಾರಿಗೊಳಿಸಿದರು ಎಂದು ತಿಳಿಸಿದರು.
ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ.ಸುರೇಶ್‌ಬಾಬು ವಿಶೇಷ ಉಪನ್ಯಾಸ ನೀಡಿದರು. ಬಳಿಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಲಯದ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.