ಚಿತ್ರದುರ್ಗ: ರಾಜ್ಯ ರಾಜಕಾರಣಕ್ಕೆ ಹಿಂತಿರುಗಿರುವ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರು ಡಿಸಿಎಂ ಆಗಬೇಕು ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಮಂಗಳವಾರ ಶ್ರೀಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುನಿಯಪ್ಪ ಅವರ ರಾಜಕಾರಣ ಪ್ರವೇಶದಿಂದಾಗಿ ಮಾದಿಗ ಸಮುದಾಯ ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ ಬೆಂಬಲಿಸಿದೆ. ಈ ಹಿನ್ನೆಲೆಯಲ್ಲಿ ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪುರ ಸೇರಿ ಸಮುದಾಯದ ಮೂರ‌್ನಾಲ್ಕು ಶಾಸಕರಲ್ಲಿ ಇಬ್ಬರನ್ನಾದರೂ ಮಂತ್ರಿಗಳನ್ನಾಗಿ ಮಾಡಿದರೆ ರಾಜ್ಯದ ದಕ್ಷಿಣ ಮತ್ತು ಉತ್ತರ ಪ್ರಾಂತ್ಯಗಳಿಗೆ ಸಾಮಾಜಿಕ ನ್ಯಾಯ ದೊರೆಯುತ್ತದೆ. ಅವಕಾಶ ಒದಗಿದರೆ ಸಂಸದ, ಕೇಂದ್ರ ಮಂತ್ರಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಮುನಿಯಪ್ಪ ಅವರು ಡಿಸಿಎಂ ಆಗಲಿ ಎಂದರು.
ಹಿರಿಯೂರು ಶ್ರೀ ಆದಿಜಾಂಬವ ಗುರುಪೀಠದ ಅಧ್ಯಕ್ಷ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಡಿಸಿಎಂ ಹುದ್ದೆ ಸೃಷ್ಟಿಯಾದಲ್ಲಿ ಮಾದಿಗ ಸಮುದಾಯದ ಶಾಸಕರನ್ನೂ ಪರಿಗಣಿಸಬೇಕು. ಜನರ ಮಧ್ಯೆ ಇರುವಂಥ ಜವಾಬ್ದಾರಿ ಖಾತೆಗಳನ್ನು ಕೊಡಬೇಕು. ಅಧಿಕಾರ ಹಂಚುವಾಗ ಕೆಲವು ಸೂತ್ರ ಪಾಲಿಸಬೇಕಾಗುತ್ತದೆ. ಅಂಥ ಸನ್ನಿವೇಶದಲ್ಲಿ 2ನೇ ಅತ್ಯುನ್ನತ ಸ್ಥಾನವನ್ನು ಕೊಟ್ಟು ರಾಜಕಾರಣದಲ್ಲಿ ಸಮಾಜದ ಶಕ್ತಿಯನ್ನು ಹೆಚ್ಚಿಸಬೇಕಿದೆ ಎಂದರು.
ರಾಜ್ಯ ಮಾತಾಂಗ ಫೌಂಡೇಶನ್ ಅಧ್ಯಕ್ಷ ಆರ್.ಲೋಕೇಶ್ ಮಾತನಾಡಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯ ಕಾಂಗ್ರೆಸ್ ಕೈ ಹಿಡಿಯದ ಕಾರಣಕ್ಕೆ ಅಧಿಕಾರಕ್ಕೆ ಬರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ನಮ್ಮ ಸಮಾಜ ಕಾಂಗ್ರೆಸ್ ಬೆಂಬಲಿಸಿದೆ. ರಾಜೀ ಸನ್ನಿವೇಶದಲ್ಲಿ ಸಿಎಂ ಸ್ಥಾನಕ್ಕೆ ಬೇರೊಬ್ಬರನ್ನು ಪರಿಗಣಿಸುವುದೇ ಆದರೆ ಮುನಿಯಪ್ಪ ಅವರನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಸನ್ನ ಚಕ್ರವರ್ತಿ, ರವಿ ಹೊಸಮನಿ, ಕುಮಾರಸ್ವಾಮಿ, ಮಂಜುನಾಥ, ಲಕ್ಷಿ ್ಮೀರಂಗಯ್ಯ, ರಂಗಧಾಮಯ್ಯ, ವೆಂಕಟೇಶ್ ಇತರರು ಇದ್ದರು.