ಜಿಲ್ಲೆ

ಸಾಮಾಜಿಕ ನ್ಯಾಯದ ಅರಿವಿಲ್ಲದೆ ಟೀಕೆ

ಮಳವಳ್ಳಿ: ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಮಾಜಿಕ ನ್ಯಾಯದ ಅರಿವಿಲ್ಲದ ವಿರೋಧಿಗಳು ಟೀಕೆ ಮಾಡುತ್ತಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನವಾರ ಆಯೋಜಿಸಿದ್ದ ಮನ್‌ಮುಲ್ ಆಡಳಿತ ಮಂಡಳಿಗೆ ತಾಲೂಕಿನಿಂದ ಆಯ್ಕೆಯಾಗಿರುವ ನೂತನ ನಿರ್ದೇಶಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ ಘೋಷಣೆ ಮಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವಂತೆ ಮಾಡಿದರು. ರಾಜ್ಯದ ಕ್ಷೀರ ಕ್ರಾಂತಿಗೆ ಮಹಿಳಾ ಶಕ್ತಿಯೇ ಕಾರಣ. ಅವರ ಬದುಕಿಗೆ ಆಸರೆಯಾಗಿರುವ ಹೈನುಗಾರಿಕೆಯಿಂದ ಜೀವನ ನಿರ್ವಹಣೆಯೊಂದಿಗೆ ಆರ್ಥಿಕ ಸದೃಢತೆಗೆ ನಾಂದಿಯಾಗಿದೆ ಎಂದರು.

ನಂದಿನಿ ಉತ್ಪನ್ನಗಳನ್ನು ರಾಷ್ಟ್ರ ರಾಜಧಾನಿ ದೆಹಲಿಗೂ ವಿಸ್ತರಿಸಲಾಗಿದೆ. ದೆಹಲಿ ಸೇರಿದಂತೆ ಹೊರ ರಾಜ್ಯದಲ್ಲಿ ನಂದಿನಿ ಹಾಲಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲಾಗಿದೆ ಎಂದರು.

ನೂತನ ನಿರ್ದೇಶಕ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ ಅವರನ್ನು ಅಭಿನಂದಿಸಲಾಯಿತು. ವಿವಿಧ ಫಲಾನುಭವಿಗಳಿಗೆ ಸೌಲಭ್ಯ, ಪರಿಹಾರದ ಚೆಕ್ ವಿತರಿಸಲಾಯಿತು.

ಮನ್ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ನಿರ್ದೇಶಕ ಹರೀಶ್ ಬಾಬು, ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಉಪ ಕಚೇರಿ ಮುಖ್ಯಸ್ಥ ಡಾ.ಸದಾಶಿವ, ವಿಸ್ತರಣಾಧಿಕಾರಿ ಶೋಬಿತ್‌ಗೌಡ, ಜೆ.ಇಂದ್ರ, ಎಸ್.ಎನ್.ರೇಖಾ ಇತರರಿದ್ದರು.