ಜಿಲ್ಲೆ

ಸಾಮಾಜಿಕ ನ್ಯಾಯಕ್ಕೆ ಬದ್ಧ

ಬಾಗಲಕೋಟೆ: ಬಸವಾದಿ ಶರಣರು ಸಮ ಸಮಾಜಕ್ಕಾಗಿ ಅಪಾರ ಶ್ರಮ ವಹಿಸಿದ್ದಾರೆ. ಅವರ ತತ್ವದ ಅಡಿಯಲ್ಲಿ ನನ್ನ ಅಧಿಕಾರ ಅವಧಿಯಲ್ಲಿ ಸಾಮಾಜಿಕ ನ್ಯಾಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವದಿಲ್ಲ. ಸದಾ ಶೋಷಿತರ ಪರ ಧ್ವನಿಯಾಗಿರುತ್ತೇನೆ. ಸಿದ್ದರಾಮೇಶ್ವರರ ಭೋವಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಕೆಪಿಎಸ್‌ಸಿ ಸದಸ್ಯ ಸ್ಥಾನಕ್ಕೆ ಸಮಾಜದ ವ್ಯಕ್ತಿ ನೇಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನವನಗರದ ಭೋವಿ ಗುರು ಪೀಠದಿಂದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೀಠದ ಗುರುಕುಟೀರ ಉದ್ಘಾಟನೆ, ಶ್ರೀಶರಣ ಬಸವ ಸ್ವಾಮೀಜಿಗಳ ಗದ್ದುಗೆ ಶಿಲಾನ್ಯಾಸ, ಭೋವಿ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದವರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಸಿದ್ದರಾಮೇಶ್ವರರು ನೇರ ನುಡಿಯ ನಿಷ್ಠುರ ವಚನಕಾರರಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಶರಣರು ಧಯವೇ ಧರ್ಮದ ಮೂಲವಯ್ಯ ಅಂತ ಸಾರಿದರು. ಮನುಷ್ಯರಿಗಾಗಿ ಧರ್ಮ, ಧರ್ಮಕ್ಕಾಗಿ ಮನುಷ್ಯರಲ್ಲ ಎನ್ನುವುದು ಅರ್ಥ ಮಾಡಿಕೊಳ್ಳಬೇಕು. ಮೌಢ್ಯ, ಕಂದಾಚಾರ ಹೋಗಲಾಡಿಸಿ ವೈಚಾರಿಕೆತೆಯ ನೆಲಗಟ್ಟನ್ನು ಅನುಭವ ಮಂಟಪದ ಮೂಲಕ ಬಸವಾದಿ ಶರಣರು ಗಟ್ಟಿಯಾಗಿ ಬೇರೂರುವಂತೆ ಮಾಡಿದರು ಎಂದರು.

ವ್ಯಾಸರಾಯರಮಠದಲ್ಲಿ ಒಂದು ಸಾರಿ ಶ್ರೀಗಳು ದೇವರು ಎಲ್ಲಿದ್ದಾನೆ ಅಂತ ಪ್ರಶ್ನಿಸಿದರು. ಕನಕ ದಾಸರು ದೇವರು ಇಲ್ಲದ ಜಾಗ ಇಲ್ಲ ಅಂತ ಸ್ಪಷ್ಟವಾದ ಸಂದೇಶ ನೀಡಿದರು. ಅದೇ ರೀತಿ ಸಮಾಜದಲ್ಲಿ ಶ್ರೇಣಿಕೃತ ವ್ಯವಸ್ಥೆ ಇರಬಾರದು. ೨೦೧೫-೧೬ ರಲ್ಲಿ ನಮ್ಮ ಸರ್ಕಾರ ಇದ್ದಾಗ ಭೋವಿ ಸಮಾಜದ ಅಭಿವೃದ್ಧಿ ನಿಗಮ ಮಾಡಿದೆ. ಮುಂದೆಯು ಸಮಾಜದ ಬೇಡಿಕೆಗಳನ್ನು ಈಡೇರಿಸಲಾಗುವುದು. ಡೋಂಗಿ ರಾಜಕಾರಣ ಮಾಡುವದಿಲ್ಲ. ಸುಳ್ಳು ಹೇಳುವದಿಲ್ಲ. ಏನನ್ನು ಹೇಳುತ್ತೇವೆ ಅದನ್ನು ಮಾಡೇ ಮಾಡುತ್ತೇವೆ. ಭೋವಿ ಸಮಾಜದ ಸದಾ ನಮ್ಮ ಜೊತೆಗೆ ಇರಬೇಕು ಎಂದು ಮನವಿ ಮಾಡಿದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ದೇವರಾಜ ಅರಸು ಕಾಲದಲ್ಲಿ ಭೋವಿ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೊಳಿಸಲಾಯಿತು. ಸಿದ್ದರಾಮಯ್ಯ ಅವರು ಕಳೆದ ಅವಽಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಈ ಸಾರಿ ಅಧ್ಯಯನ ಪೀಠ ಸ್ಥಾಪಿಸಬೇಕು. ಕೆಪಿಎಸ್‌ಸಿ ಸದಸ್ಯರನ್ನಾಗಿ ಸಮಾಜದ ವ್ಯಕ್ತಿ ಆಯ್ಕೆ ಮಾಡಬೇಕು. ಸಮಾಜವು ಬಡತನದಲ್ಲಿದ್ದು, ಅವಕಾಶ ವಂಚಿತವಾಗಿದೆ. ಅನುದಾನ ನೀಡಿ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮುಂಬರುವ ಲೋಕಸಭಾ ಚುನಾವಣೆಗೆ ಸಮಾಜಕ್ಕೆ ಒಂದು ಟಿಕೆಟ್ ನೀಡಬೇಕು. ಕಿತ್ತೂರ ಚನ್ನಮ್ಮ ಕಾಲದಲ್ಲಿ ಇದ್ದ ವಡ್ಡರ ಯಲ್ಲಣ್ಣನ ಪ್ರಾಽಕಾರ ಸ್ಥಾಪಿಸಬೇಕು. ಸಮಾಜವು ಸದಾ ತಮ್ಮ ಸ್ಮರಿಸಲಿದೆ ಎಂದು ಹೇಳಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಿದ್ದಕೊಳ್ಳದ ಶಿವಕುಮಾರ ಸ್ವಾಮೀಜಿ, ಇಳಕಲ್ಲ ಗುರು ಮಹಾಂತ ಶ್ರೀಗಳು, ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಜೆ.ಟಿ.ಪಾಟೀಲ, ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ, ಮಾನಪ್ಪ ವಜ್ಜಲ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಜಿ.ಪಂ ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರ, ಬಾಯಕ್ಕ ಮೇಟಿ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಮುಖಂಡ ಅಶೋಕ ಲಿಂಬಾವಳಿ ಇತರರು ಇದ್ದರು.