ಜಿಲ್ಲೆ

'ಸಾಮಾಜಿಕ ಚಳವಳಿಗಳಿಂದ ಹಡಪದ ಅಪ್ಪಣ್ಣ ಇಂದಿಗೂ ಅಮರ'

ಮೈಸೂರು: ಬಸವಣ್ಣನವರ ಬಲಗೈ ಬಂಟರಂತಿದ್ದ ಹಡಪದ ಅಪ್ಪಣ್ಣ ಅವರು ಸಾಮಾಜಿಕ ಚಳವಳಿ, ವಚನಗಳಿಂದ ಇಂದಿಗೂ ಅಮರರಾಗಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಅಂದಿನ ಕಾಲಘಟ್ಟದಲ್ಲಿ ಹಡಪದ ಸಮಾಜದವರು ಎದುರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢನಂಬಿಕೆ ಇತ್ತು. ಇದನ್ನು ಹೋಗಲಾಡಿಸುವುದಕ್ಕಾಗಿಯೇ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆ ಎನ್ನಲಾಗಿದೆ ಎಂದು ಹೇಳಿದರು.

ಅಪ್ಪಣ್ಣ ಅವರ ಧರ್ಮಪತ್ನಿ ಲಿಂಗಮ್ಮ ಅವರು ಸಹ ಮಹಾನ್ ವಚನಗಾರ್ತಿಯಾಗಿದ್ದರು. ಇವರು ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ ಎಂದರು.

ಅಪ್ಪಣ್ಣ ಹಡಪದ ಸಮಾಜಕ್ಕಾಗಿ ಮಾತ್ರ ಕೆಲಸ ಮಾಡಲಿಲ್ಲ, ಇಡೀ ಸಮಾಜಕ್ಕಾಗಿ ತನ್ನ ಸೇವೆ ಮಾಡಿದ್ದರು. ಆದರೆ ಇಂದಿಗೂ ನಮ್ಮ ಸಮಾಜದಲ್ಲಿ ತಾರತಮ್ಯ ಹೋಗಿಲ್ಲ. ಸಾಮಾಜಿಕ ಬದಲಾವಣೆ ಅಗಬೇಕು ಎಂದು ಅಭಿಪ್ರಾಯಪಟ್ಟರು.

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ವಿದ್ಯೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ ಎಂಬುದು ಬಹಳ ಹಿಂದಿನಿಂದಲೂ ಇದ್ದು, ಇದಕ್ಕೆ ಹಡಪದ ಅಪ್ಪಣ್ಣನವರೇ ಸಾಕ್ಷಿ ಎಂದು ಹೇಳಿದರು.

ಬಾಲ್ಯದ ಗೆಳೆಯರಾಗಿದ್ದ ಅಪ್ಪಣ್ಣ ಅವರು ಬಸವಣ್ಣ ಅವರು ಕಲ್ಯಾಣದ ಪ್ರಧಾನ ಮಂತ್ರಿಯಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಬಸವಣ್ಣನವರೊಂದಿಗೆ ಅವರು ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಅಲ್ಲಿ ಅವರು ಸಮಾಜದಲ್ಲಿನ ಅಸಮಾನತೆಗಳನ್ನು ಪ್ರಶ್ನಿಸಿದ್ದಲ್ಲದೆ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದರು ಎಂದು ತಿಳಿಸಿದರು.

ಅಧ್ಯಾಪಕರು ಲೇಖಕ ಕಿರಣ್ ಸಿಡ್ಲೇಹಳ್ಳಿ ಮಾತನಾಡಿ, ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿ ಬಸವಣ್ಣನವರ ಬೆಂಬಲಕ್ಕೆ ನಿಂತಿದ್ದರು. ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದು ಎಂದರು.

ಹಡಪದ ಸಮಾಜ ಆರ್ಥಿಕವಾಗಿ ಹಿಂದುಳಿದ ಕಾರಣ ಅವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸದೃಢರಾಗುವಂತೆ ಮಾಡಲು ಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕೋರಿದರು.

ಇತಿಹಾಸದಲ್ಲಿ ಹಡಪದ ಅಪ್ಪಣ್ಣನವರ ಬಗೆಗಿನ ವಿವರಗಳು ಅತ್ಯಲ್ಪ. ಅವರ ಹೆಸರಿಗೆ ಹಡಪದ ಎಂಬ ವೃತ್ತಿ ನಾಮ ಸೇರಿಕೊಂಡಿದೆ. ಆದರೆ ಕ್ಷೌರಿಕ ಕಾಯಕದವರು ತಮ್ಮನ್ನು ಹಡಪದ ಅಪ್ಪಣ್ಣನವರ ವಂಶದವರು ಎಂದು ಹೇಳಿಕೊಳ್ಳುವುದರಿಂದ ಅವರ ವಾದವನ್ನೇ ಪುರಸ್ಕರಿಸಿ ಕವಿ ಚರಿತ್ರಕಾರರು ಅಪ್ಪಣ್ಣನವರನ್ನು ಗುರುತಿಸಿದ್ದಾರೆ ಎಂದರು.

ಮೇಲ್ಜಾತಿಯವರು ಎನಿಸಿಕೊಂಡವರು ಕೆಳಜಾತಿಯವರಲ್ಲಿ ನಿಮ್ಮ ಸ್ಥಿತಿಗೆ ಪಾಪಗಳೇ ಕಾರಣ. ಹಾಗಾಗಿ ಬ್ರಾಹ್ಮಣರಿಗೆ ಗೋದಾನ, ಭೂದಾನ, ಅನ್ನದಾನ, ಕನ್ಯಾದಾನಗಳನ್ನು ಮಾಡುವ ಮೂಲಕ ನಿಮ್ಮ ಪಾಪಗಳನ್ನು ಕಳೆದುಕೊಳ್ಳಬಹುದು ಎಂಬ ಮೌಢ್ಯವನ್ನು ಬಿತ್ತಿದರು ಎಂದು ಹೇಳಿದರು.

ಅಜ್ಞಾನದಲ್ಲಿ ಮುಳುಗಿದ್ದ ಶ್ರಮಿಕವರ್ಗ ತಮ್ಮ ದುಡಿಮೆಯನ್ನೆಲ್ಲ ಇದಕ್ಕಾಗಿಯೇ ಸುರಿದು ಕಷ್ಟದ ಬದುಕನ್ನು ನಡೆಸುವುದನ್ನು ಕಂಡ ಅಪ್ಪಣ್ಣನವರು ಮೂಢನಂಬಿಕೆಯ ದಾಸರಾಗದೆ ವೈಚಾರಿಕತೆ ಬೆಳೆಸಿಕೊಳ್ಳುವಂತೆ ಜನರನ್ನು ಎಚ್ಚರಿಸಿದ್ದರು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್, ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ ಇತರರು ಇದ್ದರು.