ಕಲಬುರಗಿ: ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ಜರುಗಿದ ‘ಸಾಮಾಜಿಕ ಕ್ರಾಂತಿ’ ವಿಶ್ವದ ಇತಿಹಾಸ ಪುಟಗಳಲ್ಲಿ ಅದ್ಭುತವಾದದ್ದು. ಇದರಲ್ಲಿ ಅನೇಕ ಶರಣ-ಶರಣಿಯವರು ಅವರ ಜೊತೆಗೂಡು ಶ್ರಮಿಸಿದ್ದಾರೆ. ಸಾಮಾಜಿಕ ಸುಧಾರಣೆಗಾಗಿ ನಿರಂತರವಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ವೀರಮಾತೆ ಅಕ್ಕನಾಗಮ್ಮನವರು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಾಶವಾಗುತ್ತಿದ್ದ ವಚನಗಳನ್ನು ಸಂರಕ್ಷಿಸುವ ಮೂಲಕ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯಲ್ಲಿರುವ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ವೀರಮಾತೆ ಅಕ್ಕನಾಗಮ್ಮನವರ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಅಕ್ಕ ನಾಗಮ್ಮನವರು ರಚಿಸಿದ 15 ವಚನಗಳು ಲಭ್ಯವಾಗಿವೆ. ಅವುಗಳಲ್ಲಿ ಆತ್ಮಾವಲೋಕನಕ್ಕೆ ಸಂಬಂಧಿಸಿದ ವಚನಗಳು ಹೆಚ್ಚಾಗಿವೆ. ಇದಲ್ಲದೇ ವೈಚಾರಿಕತೆ, ಭಕ್ತಿ, ಗುರು, ಲಿಂಗ, ಜಂಗಮ, ಲಿಂಗಾಂಗ ಸಾಮರಸ್ಯ, ಸಂಸ್ಕಾರ, ಆಚಾರ- ವಿಚಾರ ಸೇರಿದಂತೆ ಹೀಗೆ ಸಾಕಷ್ಟು ವಿಷಯಗಳಿಗೆ ಸಂಬAಧಿಸಿದAತೆ ಸಮಾಜದ ಬೆಳವಣಿಗೆಗೆ ಪೂರಕವಾದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರ ಸಮಾಜಮುಖಿ ವಿಚಾರಧಾರಗೆ ನೀರೆರೆದು ಪೋಷಿಸಿ ಬೆಳೆಸಿದ ಧೀರ, ವೀರಮಾತೆ ಅವರಾಗಿದ್ದಾರೆ ಎಂದರು.
ಪ್ರಮುಖರಾದ ಪರಮೇಶ್ವರ ಬಿ.ದೇಸಾಯಿ, ಪ್ರಕಾಶ ಸರಸಂಬಿ, ಮಹಾಂತೇಶ ಬಿ.ಬಿರಾದಾರ, ಶಿವಯೋಗೆಪ್ಪ ಬಿರಾದಾರ, ಅಮರ ಜಿ.ಬಂಗರಗಿ, ಅರ್ಜುನ ಪಾಲನ್, ನಂದೀಶ್ ಮರಡಿ ಸೇರಿದಂತೆ ಮತ್ತಿತರರಿದ್ದರು.