ಹಾಸನ: ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ, ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುವಂತೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎನ್ ಇನ್ನವಳ್ಳಿ ಅವರು ಸಲಹೆ ನೀಡಿದರು.
ಲೋಕಾಯುಕ್ತ ಹಾಸನ ವಿಭಾಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಹಾಸನ ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಮತ್ತು ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988(ತಿದ್ದುಪಡಿ 2018) ಕುರಿತಂತೆ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಆಸ್ಪತ್ರೆ, ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತದಂತೆ ಜೀವನ ನಡೆಸಲು ಮುತುವರ್ಜಿ ವಹಿಸುವಂತೆ ಹೇಳಿದರು.
ಸಾಮಾನ್ಯ ಜ್ಞಾನದೊಂದಿಗೆ ಕರ್ತವ್ಯ ನಿರ್ವಹಿಸಿ, ಸಿವಿಲ್ ಅಥವಾ ಕ್ರಿಮಿನಲ್ ಯಾವುದೇ ಪ್ರಕರಣ ನೋಡಬೇಕಾದರೆ ಸಾಕ್ಷಿ ಬಹುಮುಖ್ಯವಾಗುತ್ತದೆ. ಸತ್ಯ ಸಂಗತಿಗಳ ಕುರಿತ ದಾಖಲೆಗಳು ಅಗತ್ಯವಾಗುತ್ತದೆ. ಯಾವುದೇ ಪ್ರಚಾರಕ್ಕಾಗಿ ಕೆಲಸ ಮಾಡಬೇಡಿ. ತಮ್ಮ ಅಂತಃಕರಣದ ತೃಪ್ತಿಗಾಗಿ ಕೆಲಸ ಮಾಡಿ ಎಂದರು.
ಲಂಚ ತೆಗೆದುಕೊಳ್ಳುವುದು ಹೇಗೆ ಅಪರಾಧವೋ ಹಾಗೇ ಲಂಚ ಕೊಡುವುದು ಅಪರಾದವೇ. ಅದು ಹಣವಾಗಿರಬಹುದು ಮತ್ಯಾವುದೆ ರೂಪದಲ್ಲಿ ಏನನ್ನೇ ಪಡೆದರೂ ಅದು ಕಾನೂನಿನಡಿ ಅಪರಾಧವೇ. ಬೇರೆಯವರನ್ನು ಸರಿಪಡಿಸಲು ಹೋಗದೆ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಿರಿ. ಯಾವುದೇ ದೂರುಗಳು ಬಂದಾಗ ಪರಿಶೀಲನೆ ಮಾಡಿ ಕಾನೂನುಬದ್ಧವಾಗಿ ತಿಳಿದುಕೊಂಡು ವಿಚಾರಣೆ ಮಾಡಿ ಮುಂದುವರೆಯಿರಿ. ದೇವರು ಕೊಟ್ಟ ಈ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳದೆ ಯೋಗ್ಯತೆಯಿಂದ ಕೆಲಸ ಮಾಡಿ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ವಿಷಯ ತಿಳಿದುಕೊಳ್ಳುವುದರ ಜತೆಗೆ ಜೀವನದಲ್ಲಿ ಅಳವಡಿಸಿಕೊಂಡರೆ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಮಾತನಾಡಿ ಎಷ್ಟೇ ಕಾನೂನು ಕಟ್ಟಳೆಗಳನ್ನು ತಂದರೂ ಬಹಳ ಚಾಣಾಕ್ಷತನದಿಂದ ಅವುಗಳನ್ನು ಮುರಿಯುವ ಕೆಲಸ ಮಾಡುತ್ತಾರೆ. ತಾನು ಮಾಡಿದ್ದು ಸರಿಯೇ ಎಂಬುದನ್ನು ಪ್ರಶ್ನೆ ಮಾಡಿಕೊಂಡು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸರ್ಕಾರಿ ನೌಕರರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುಬೇಕು. ಬಡಜನತೆಯನ್ನು ಕಚೇರಿಗೆ ಅಲೆಸದೆ ಅವರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು ಎಂದರಲ್ಲದೆ, ನಿಗದಿತ ಸಮಯದಲ್ಲಿ ಕಡತಗಳನ್ನು ವಿಲೇವಾರಿ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ದುರಾಸೆ, ದುರಹಂಕಾರ ಹಾಗೂ ಹೊಟ್ಟೆಕಿಚ್ಚಿನಿಂದ ದೂರವಿದ್ದು ಮಹಾಗ್ರಂಥಗಳ ಸಾರವನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಮನುಷ್ಯ ಜನ್ಮವನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಿ. ಜೀವನದಲ್ಲಿ ಆಸೆ ಇರಲಿ, ಆದರೆ ದುರಾಸೆ ಬೇಡ. ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಿ ಎಂದ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ್ ಅವರು ಮಾತನಾಡಿ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಯಾರಿಗೂ ತಲೆ ಬಾಗುವಂತಿರುವುದಿಲ್ಲ. ಈ ನಿಟ್ಟಿನಲ್ಲಿ ಜಾಗರೂಕರಾಗಿ ಕರ್ತವ್ಯ ನಿರ್ವಹಿಸಿ. ಯಾವುದೇ ಫಲಾಪೇಕ್ಷೆಯಿಲ್ಲದೆ ಜತೆಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ರಾಜ್ಯ, ಸಮುದಾಯ, ಸಾರ್ವಜನಿಕ ಹಿತಾಸಕ್ತಿಯಿಂದ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರ ಜವಾಬ್ದಾರಿ ಇದೆ. ಅಂತಹ ಕೃತ್ಯಗಳು ಕಂಡುಬಂದಲ್ಲಿ ಕಾನೂನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಅವುಗಳ ಸಂಖ್ಯೆಯನ್ನು ಕ್ರಮೇಣ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಸಾರ್ವಜಕರು ಜಾಗೃತರಾಗಬೇಕು ಎಂದರು.
ಕರ್ನಾಟಕ ಲೋಕಾಯುಕ್ತ ಹಾಸನ-ಚಿಕ್ಕಮಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಸಿ. ಮಲ್ಲಿಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕರ್ತವ್ಯ ನಿಷ್ಠೆ ಹಾಗೂ ಜವಾಬ್ದಾರಿ ಮರೆಯಬಾರದು. ಕಷ್ಟದಲ್ಲಿ ಇರುವವರಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಭ್ರಷ್ಟಾಚಾರದಲ್ಲಿ ಭಾರತ 85ನೇ ಸ್ಥಾನದಲ್ಲಿದೆ. ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿ ಭ್ರಷ್ಟಾಚಾರ ಕಂಡು ಬಂದಲ್ಲಿ ದೂರು ನೀಡುವಂತೆ ಎಚ್ಚರಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಬಿ.ಆರ್ ಪೂರ್ಣಿಮಾ, ನಗರಸಭೆ ಆಯುಕ್ತ ಸತೀಶ್ ಉಪಸ್ಥಿತರಿದ್ದರು.