ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಶಿವಾನಂದ ನಿಂಗನೂರ ಪರಿವಾರ ಸೋಮವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ವಿ.ಆರ್.ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಸಚಿವ ಮುರುಗೇಶ ನಿರಾಣಿ ಚಾಲನೆ ನೀಡಿದರು. ಕಾಶಿ ಜಗದ್ಗುರುಗಳು, ಹರಗುರು ಚರಮೂರ್ತಿಗಳು ಇದ್ದರು. 
ಜಿಲ್ಲೆ

ಸಾಮರ್ಥ್ಯ ಇದ್ದವರು ಸಮಾಜ ಸೇವೆಗೆ ಮುಂದಾಗಿ


ಬಾಗಲಕೋಟೆ: ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಸೋಮವಾರ ಜಗದ್ಗುರುಗಳು, ಹರಗುರು ಚರಮೂರ್ತಿಗಳು, ಗಣ್ಯರ ಶುಭಾಶೀರ್ವಾದಗಳ ಮಧ್ಯದಲ್ಲಿ ೩೦ಕ್ಕೂ ಹೆಚ್ಚು ಜೋಡಿಗಳು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಬಣಜಿಗ ಸಮಾಜದ ಹಿರಿಯರು, ಉದ್ಯಮಿ ಶಿವಾನಂದ ನಿಂಗನೂರ ಪರಿವಾರ ತಮ್ಮ ಸ್ವಂತ ಹಣದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ಶಿವಾನಂದ ನಿಂಗನೂರ ಅವರು ಹೀಗೆ ಸಾಮೂಹಿಕ ವಿವಾಹ ಮಾಡುತ್ತಿರುವುದು ಇದು ೩ನೇ ಸಲ. ಈ ಭಾರಿ ೧೦೦೮ ಜೋಡಿ ಮುಂದೆ ಬಂದರೂ ಅವರೆಲ್ಲರಿಗೂ ಉಚಿತವಾಗಿ ಮದುವೆ ಮಾಡಿಕೊಡಲು ಮುಂದಾಗಿದ್ದರು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ, ೩೦ಕ್ಕೂ ಹೆಚ್ಚು ಜೋಡಿಗಳು ಹಸೆಮಣೆ ಏರಿದರು.
ಲಿ.ಶರಣ ಗುರಪ್ಪ ಬಸಲಿಂಗಪ್ಪ ನಿಂಗನೂರ ವೇದಿಕೆಯಲ್ಲಿ ೩೦ಕ್ಕೂ ಹೆಚ್ಚು ಪೂಜ್ಯರು, ಜಿಲ್ಲೆಯ ಜನಪ್ರತಿನಿಧಿಗಳು ಗಣ್ಯರು ಈ ಶುಭ ಸಾಮೂಹಿಕ ವಿವಾಹಗಳಿಗೆ ಸಾಕ್ಷಿಯಾಗಿದ್ದರು. ನಾಡಿನ ಪ್ರಸಿದ್ದ ಉದ್ಯಮಿ, ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನವದಂಪತಿಗಳಿಗೆ ಅಕ್ಷತೆ ಹಾಕಿ ಶುಭಹಾರೈಸಿದರು. ಬಳಿಕ ಮಾತನಾಡಿದ ಅವರು, ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿ ನಿಜಕ್ಕೂ ಸೌಭಾಗ್ಯವಂತರು. ಅನೇಕ ಸ್ವಾಮೀಜಿಗಳು, ಹಿರಿಯರು ಸೇರಿ ಮನಪೂರ್ವಕ ಆಶೀರ್ವಾದ ಮಾಡಿರುವ ಮದುವೆ ಇದಾಗಿದೆ. ಬದುಕಿನಲ್ಲಿ ಆದರ್ಶ ದಂಪತಿಯಾಗಿ ಬಾಳುವಂತೆ ಕಿವಿಮಾತು ಹೇಳಿದರು
ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಯಾರಿಗೆ ಸಾಮರ್ಥ್ಯೆ ಇರುತ್ತದೆಯೋ ಅವರು ಸಮಾಜ ಸೇವೆಗೆ ಮುಂದಾಗಬೇಕು. ಯಾರೂ ಯಾವುದನ್ನೂ ಮೇಲೆ ತೆಗೆದುಕೊಂಡು ಹೋಗಲ್ಲ. ಆದರೆ, ಪರಿಕಲ್ಪನೆಯಿಂದ ಪ್ರತಿನಿತ್ಯ ಭಗವಂತನ ಪ್ರಾರ್ಥನೆ ಮಾಡಿ, ಇವತ್ತು ಯಾರ್ಯಾರಿಗೆ ಸಹಾಯ ಮಾಡಬೇಕು ಎಂದು ಚಿಂತನೆ ಮಾಡಿ, ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಸಚಿವ ಮುರುಗೇಶ ನಿರಾಣಿ ಮಾತನಾಡಿ, ಶಿವಾನಂದ ನಿಂಗನೂರ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡುತ್ತ ಬಂದಿದ್ದಾರೆ. ಇವತ್ತು ರೊಳ್ಳಿ ಗ್ರಾಮದಲ್ಲಿ ಜಾತ್ಯಾತೀತವಾಗಿ ಸಾಮೂಹಿಕ ವಿವಾಹ ಮಾಡಿರುವುದು ಶ್ಲಾಘನೀಯ. ತಮ್ಮ ಮಕ್ಕಳ ಮದುವೆ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟೆ ಕಾಳಜಿಯಿಂದ ಈ ಸಾಮೂಹಿಕ ವಿವಾಹ ಮಾಡಿದ್ದಾರೆ. ಅವರು ಮೂರನೇ ಬಾರಿಗೆ ಈ ರೀತಿ ಸಾಮೂಹಿಕ ವಿವಾಹ ಮಾಡಿದ್ದಾರೆ. ಭವಿಷ್ಯದಲ್ಲಿ ನಿಂಗನೂರ ಅವರು ಇನ್ನಷ್ಟು ಮತ್ತಷ್ಟು ಜನಪರ ಕಾರ್ಯ ಮಾಡಲು ಭಗವಂತ ಅವರಿಗೆ ಆರೋಗ್ಯ, ಆಯುಷ್ಯ ಹಾಗೂ ರಾಜಕೀಯದಲ್ಲಿ ಅಧಿಕಾರ ಸಿಗುವಂತೆ ಕೃಪೆ ತೋರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಮಾಜಿ ಸಚಿವ ಎಸ.ಆರ್.ಪಾಟೀಲ ಮಾತನಾಡಿ, ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ನಾಣ್ನುಡಿ ಇದೆ. ಅನೇಕ ಬಡವರು ಮದುವೆಯಾಗಿ ಹೊಲ ಮನೆ ಮಾರಿ, ಹತ್ತಾರು ವರ್ಷ ಮದುವೆ ಸಾಲ ತೀರಿಸಲು ಮತ್ತೊಬ್ಬರ ಕಡೆಗೆ ದುಡಿಯುತ್ತಿದ್ದನ್ನು ನಾವೆಲ್ಲ ನೋಡಿದ್ದೇವೆ. ಇಂತ ಯಾವುದೇ ಆರ್ಥಿಕ ನಷ್ಟಕ್ಕೆ ಅವಕಾಶ ಕೊಡದೇ ತಮ್ಮ ಸ್ವಂತ ಹಣದಲ್ಲಿ ಮತ್ತೊಬ್ಬರ ಮದುವೆ ಮಾಡುವುದು ಸುಲಭವಲ್ಲ. ಅದನ್ನು ನಿಂಗನೂರ ಪರಿವಾರ ಮಾಡಿರುವುದು ಇತರರಿಗೂ ಮಾದರಿಯಾಗಿದೆ. ನಾವು ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಮದುವೆ ಇಷ್ಟೊಂದು ಪೂಜ್ಯರೂ ಬದುವುದಿಲ್ಲ. ಆದರೆ, ಸಾಮೂಹಿಕ ವಿವಾಹದಲ್ಲಿ ಹತ್ತಾರು ಸ್ವಾಮೀಜಿಗಳು, ಗಣ್ಯರು, ಹಿರಿಯರು ಸೇರಿ ಮದುವೆಗೆ ಆಶೀರ್ವಾದ ಮಾಡುತ್ತಾರಲ್ಲ. ಇಲ್ಲಿ ಮದುವೆಯಾದವರೆ ನಿಜವಾಗಿ ಸೌಭಾಗ್ಯವಂತರು. ಅಪರೂಪಕ್ಕೆ ಅಪರೂಪವಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಡಾ.ವಿಜಯ ಸಂಕೇಶ್ವರ ಅವರು ಈ ಒಂದು ಉತ್ತಮ ಕೆಲಸ ನೋಡಿ ಭಾಗವಹಿಸಿದ್ದು, ನಿಜಕ್ಕೂ ನವದಂಪತಿ ಅದೃಷ್ಟ ಎಂದು ಬಣ್ಣಿಸಿದರು.
ಕಾಶಿ ಮಹಾಪೀಠದ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದ ಮಹಾಸ್ವಾಮೀಜಿ, ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಗಿರಿಸಾಗರದ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ, ಮುತ್ತತ್ತಿ ಶಿವಲಿಂಗ ಸ್ವಾಮೀಜಿ, ಬಿಲ್ ಕೆರೂರ ಸಿದ್ದಲಿಂಗ ಶಿವಾಚಾರ್ಯರು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಬೂದಿಹಾಳದ ಫಕೀರೇಶ್ವರ ಸ್ವಾಮೀಜಿ, ಕಲ್ಮಠದ ಗುರುಪಾದ ಶಿವಾಚಾರ್ಯರು ಸೇರಿದಂತೆ ಹಲವಾರು ಮಠಾಧೀಶರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕ ಜೆ.ಟಿ.ಪಾಟೀಲ, ಮಾಜಿ ಸಚಿವ ಎಚ್.ವೈ.ಮೇಟಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ನಿವೃತ್ತ ಪೊಲೀಸ ಮಹಾನಿರ್ದೇಶಕ ಶಂಕರ ಬಿದರಿ, ಅಶ್ವದಳದ ನಿವೃತ್ತದ ಕಮಿಷನರ ಎಸ್.ಜಿ.ಮರಿಬಾಶೆಟ್ಟಿ, ಜಿಪಂ ಮಾಜಿ ಸದಸ್ಯ ಬಸವರಾಜ್ ಖೋತ, ರಾಜ್ಯ ಬಣಜಿಗರ ಸಂಘದ ಅಧ್ಯಕ್ಷ ಅಂದಪ್ಪ ಜವಳಿ, ಉಪಾಧ್ಯಕ್ಷ ಎನ್.ಬಿ.ಬನ್ನೂರ, ಪ್ರ.ಕಾರ್ಯದರ್ಶಿ ರವಿ ಕುಮಟಗಿ, ಕಾಂಗ್ರೆಸ್ ಮುಖಂಡ ಶ್ರೀಶೈಲ ದಳವಾಯಿ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮಾಲೀಕ ಜಗದೀಶ ಗುಡಗುಂಟಿ, ಸತೀಶ ಬಂಡಿವಡ್ಡರ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ಮತ್ತಿತರರು ವೇದಿಕೆಯಲ್ಲಿ ಇದ್ದರು.

ನಿಂಗನೂರ ದಂಪತಿಗೆ ಸನ್ಮಾನ :

ಇನ್ನು ಕಾರ್ಯಕ್ರಮದ ರೂವಾರಿ ಶಿವಾನಂದ ನಿಂಗನೂರ ದಂಪತಿಯನ್ನು ಕಾಶಿ ಜಗದ್ಗುರುಗಳು, ಸಚಿವ ಮುರುಗೇಶ ನಿರಾಣಿ ಸೇರಿದಂತೆ ಅನೇಕ ಗಣ್ಯರು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.

ಕೋಟ್….
ಉಚಿತವಾಗಿ ಸಾಮೂಹಿಕ ವಿವಾಹ ಮಾಡಬೇಕು. ಅನೇಕ ಮಹಾತ್ಮರ ಸಮ್ಮುಖದಲ್ಲಿ ಇಂತ ರಚನಾತ್ಮಕ ಕಾರ್ಯ ಮಾಡಬೇಕು ಎನ್ನುವುದು ನನ್ನ ಕನಸು. ಇದೆಲ್ಲ ನಮ್ಮ ಹಿರಿಯರ ಪುಣ್ಯದಿಂದ ಆಗಿರುವಂತದ್ದು. ದುಡ್ಡು ಮುಖ್ಯವಲ್ಲ, ಜಾತಿ ಮುಖ್ಯವಲ್ಲ. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕುವುದು ಮುಖ್ಯ. ಹಿರಿಯರ ಆಶೀರ್ವಾದ ಇದ್ದರೆ ಇಂತ ಹಲವಾರು ಕೆಲಸ ಮಾಡಲು ಶಕ್ತಿ ದೊರೆಯಲಿ.
-ಶಿವಾನಂದ ನಿಂಗನೂರ ಸಾಮೂಹಿಕ ವಿವಾಹ ಏರ್ಪಡಿಸಿದ್ದವರು.

ಕೋಟ್….
ಶಿವಾನಂದ ನಿಂಗನೂರ ಅವರು ಏರ್ಪಡಿಸಿರುವ ಈ ಸಾಮೂಹಿಕ ವಿವಾಹ ಸಮಾರಂಭ ವೈಭವಯುತವಾಗಿದೆ. ಪೂರ್ವಜನ್ಮದ ಪುಣ್ಯದ ಫಲವಾಗಿ ಇವತ್ತು ಹಸೆಮಣೆ ಏರಿದ ಜೋಡಿಗಳಿಗೆ ಅನೇಕ ಜಗದ್ಗುರುಗಳು, ಸ್ವಾಮೀಜಿಗಳು, ಹಿರಿಯರು ಆಶೀರ್ವಾದ ದೊರೆಕಿದೆ. ಆದರ್ಶ ದಂಪತಿಗಳಾಗಿ ಜೀವನ ಸಾಗಿಸಿ.
-ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು,
ಕಾಶಿ ಮಹಾಪೀಠ.