ಬಾಗಲಕೋಟೆ: ಸ್ವಚ್ಚ ಸಂಕೀರ್ಣ ನಿರ್ವಹಣೆಯಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಸಾಮರ್ಥ್ಯ ಅಭಿವೃದ್ದಿ ತರಬೇತಿ ಅವಶ್ಯವಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ತಿಳಿಸಿದರು.
ಜಿ.ಪಂ ನೂತನ ಸಭಾಭವನದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನಯೋಪಾಯ ಇಲಾಖೆ ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಸ್ವಚ್ಛ ಸಂಕೀರ್ಣ ನಿರ್ವಹಣೆಯಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಹಾಗೆ ಗ್ರಾಮವನ್ನು ಸ್ವಚ್ಚವಾಗಿಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದರು.
ಗ್ರಾಮಗಳ ಅಭಿವೃದ್ಧಿಗೆ ದೂರದೃಷ್ಠಿ ಯೋಜನೆ ಅಗತ್ಯವಾಗಿದೆ. ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ, ಘನತ್ಯಾಜ್ಯ ವಿಲೇವಾರಿ ಮುಖ್ಯವಾಗಿದೆ. ಗ್ರಾಮಗಳ ಘನತ್ಯಾಜ್ಯವನ್ನು ಬೇರ್ಪಡಿಸಿ ವಿಲೇವಾರಿಯಲ್ಲಿ ಸ್ವ-ಸಹಾಯಗಳ ಪಾತ್ರ ಮುಖ್ಯವಾಗಿದೆ. ಇದರಿಂದ ಮಹಿಳೆಯರು ಉದ್ಯೋಗ ಪಡೆಯುವದರ ಜೊತೆಗೆ ಗ್ರಾಮ ಸ್ವಚ್ಚವಾಗಿಡಲು ಸಾಧ್ಯವಾಗುತ್ತದೆ. ತಮ್ಮದೇಯಾದ ನಿವೇಶನ ಹೊಂದಿದಲ್ಲಿ ಶೆಡ್ ನಿರ್ಮಿಸಿಕೊಂಡು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.
ಮಹಿಳೆ ಸ್ವಚ್ವವಾಹಿನಿಯ ಚಾಲನೆ ಮಾಡುವದಷ್ಟೇ ಅಲ್ಲ ಟ್ಯಾಕ್ಟರ್, ಜೆಸಿಬಿಗಳನ್ನು ಸಹ ಚಾಲನೆ ಮಾಡುತ್ತಿದ್ದಾರೆ. ಗಂಡಿಗೆ ಸಮಾನವಾದ ಕೆಲಸವನ್ನು ಮಹಿಳೆಯರು ಮಾಡಬಹುದಾಗಿದೆ. ಇದಕ್ಕಾಗಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಮರ್ಥ್ಯ ಅಭಿವೃದ್ದಿ ತರಬೇತಿ ನೀಡುವ ಮೂಲಕ ಮಹಿಳಾ ಸಭಲೀಕರಣದ ಜೊತೆಗೆ ಗ್ರಾಮಗಳ ಅಭವೃದ್ದಿ ಮಾಡಲಾಗುತ್ತಿದೆ. ತರಬೇತಿ ಸಂಪೂರ್ಣ ಲಾಭವನ್ನು ತಾವುಗಳು ಪಡೆದುಕೊಳ್ಳಬಹುದಾಗಿದೆ ಎಂದರು.
ಜಿ.ಪಂ ಸಿಇಒ ಟಿ.ಭೂಬಾಲನ್ ಮಾತನಾಡಿ, ಜಿಲ್ಲೆಯಲ್ಲಿ ಸುಸಜ್ಜಿತವಾದ ಕಟ್ಟಡ ಹೊಂದಿರುವ ಸ್ಥಳಗಲ್ಲಿ ಡಿಜಿಟಲ್ ಗ್ರಂಥಾಲಯ ಪ್ರಾರಂಭಿಸಲಾಗುತ್ತದೆ. ಘನತ್ಯಾಜ್ಯ ವಿಲೇವಾರಿಗೆ ಕಾರ್ಯಕ್ಕೆ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಪರ ಕಾರ್ಯದರ್ಶಿಗಳು ಹೇಳಿದ ವಿಷಯಗಳನ್ನು ಪಾಲಿಸುವುದಾಗಿ ತಿಳಿಸಿದ ಅವರು ಜಿಲ್ಲೆಯಲ್ಲಿರುವ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಎ.ಎನ್.ಎನ್.ಎಸ್.ಐ.ಆರ್.ಡಿ ಮತ್ತು ಪಿಆರ್ ನಿರ್ದೇಶಕಿ ಲಕ್ಷ್ಮೀ ಪ್ರೀಯಾ ಅವರು ದೂರದೃಷ್ಠಿ ಯೋಜನೆ ಕುರಿತು, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಜಿಲ್ಲೆಯ ಪ್ರಸ್ತುತ ಅನುಷ್ಠಾನ ಹಾಗೂ ಪ್ರಗತಿ ವರದಿ ಕುರಿತು ಮಾತನಾಡಿದರು. ಹಸಿರು ದಳ ಸಂಸ್ಥೆಯ ಮಂಜುನಾಥ ಕಸ ವಿಂಗಡಣೆ ಕುರಿತು, ಬೆಂಗಳೂರಿನ ಸಾಹಸ್ ಸಂಸ್ಥೆ ಪ್ರತಿನಿಧಿ ಚಂದ್ರಶೇಖರ ಸುಸ್ಥಿರ ಕಸ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕುಂದರಗಿ ಗ್ರಾಮ ಪಂಚಾಯತಿಯ ಸ್ವಚ್ಛ ವಾಹಿನಿ ಚಾಲಕಿ ಶರೀಪಾಬಾನು ಬೂದಿಹಾಳ, ಸೂಳಿಭಾವಿ ಗ್ರಾಮದ ತ್ಯಾಜ್ಯ ನಿರ್ವಹಣೆ ಮಹಿಳಾ ಸದಸ್ಯೆ ಶ್ರೀದೇವಿ ಮಾದರ, ಕುಳಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ತೇಲಿ ಸೇರಿದಂತೆ ಇತರರು ಕಾರ್ಯಾಗಾರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಾಗಾರದಲ್ಲಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕನಿಷ್ಕ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ನೂತನ ಎರಡು ಸ್ವಚ್ಚ ವಾಹಿನಿಗಳಿಗೆ ಚಾಲನೆ ನೀಡಿದರು.